ನಾವು ಸುಖ ಪಡುವುದು ನಮ್ಮ ಅರಿವಿನಿಂದ ಎಂಬ ಮಾತು ಮೇಲ್ನೋಟಕ್ಕೆ ತುಂಬ ಸರಳವಾಗಿ ಕಾಣಬಹುದು. ಆದರೆ ಅದರೊಳಗಿನ ಅರ್ಥ ಅಷ್ಟೇ ಘನವಾದದ್ದು. ಅರಿವು ಎಂದರೆ ಪ್ರಜ್ಞೆ. ಈ ಪ್ರಜ್ಞೆಯು ಆತ್ಮಕ್ಕೆ ಸಂಬಂಧಿಸಿದಾಗ ಮಾತ್ರವೇ ಅದು ನಿಜವಾದ ಅರ್ಥದಲ್ಲಿ ಅರಿವು ಎಂದೆನಿಸಿಕೊಳ್ಳುತ್ತದೆ. ಪಂಚೇಂದ್ರಿಯಗಳ ಮೂಲಕ ನಾವು ಪಡೆಯುವ ಅನುಭವಗಳೆಲ್ಲವೂ ಬಾಹ್ಯ ವಸ್ತುಗಳನ್ನು, ವಿಷಯಗಳನ್ನು ಅವಲಂಬಿಸಿವೆ. ಹಾಗಾಗಿಯೇ ಅವು ಸಾಪೇಕ್ಷವಾಗಿವೆ. ಆದರೆ ಆತ್ಮಕ್ಕೆ ಸಂಬಂಧಿಸಿದ ಪ್ರಜ್ಞೆ ಇದಕ್ಕಿಂತ ಪೂರ್ಣ ಭಿನ್ನ. ಆತ್ಮನಿಗೆ ಯಾವ ಕಾಮನೆಗಳ ಲೇಪವೂ ಇಲ್ಲ, ಬಂಧನವೂ ಇಲ್ಲ. ಅಂತೆಯೇ ಪಾಪ-ಪುಣ್ಯಗಳ ಲವಲೇಶವೂ ಅದಕ್ಕೆ ಅಂಟಿಕೊಳ್ಳುವುದಿಲ್ಲ. ಆತ್ಮನ ಅಸ್ತಿತ್ವವನ್ನು ಅನುಭವಿಸುವುದೆಂದರೆ ದೇವರ ಅಸ್ತಿತ್ವವನ್ನು ಅನುಭವಿಸದಂತೆಯೇ. ಗಾಳಿಯನ್ನು ನಾವು ಕಾಣಲಾರೆವಾದರೂ ಅದು ನಮ್ಮನ್ನು ಸೋಂಕಿದಾಗ ಅದರ ಅರಿವಿನಿಂದ ಗಾಳಿಯ ಅಸ್ತಿತ್ವವು ನಮ್ಮ ಅನುಭವಕ್ಕೆ ಬರುವುದು. ಆತ್ಮವನ್ನಾಗಲೀ ದೇವರನ್ನಾಗಲೀ ನಾವು ಕಾಣಲಾರೆವು. ನಿಜ; ಆದರೆ ಉಭಯತರ ಅಸ್ತಿತ್ವವನ್ನು ನಮ್ಮ ಅರಿವಿಗೆ ತಂದುಕೊಳ್ಳಬೇಕಾದರೆ ಧ್ಯಾನವು ಸೂಕ್ತ ಸಾಧನ. ಒಮ್ಮೆ ರಮಣ ಮಹರ್ಷಿಗಳನ್ನು ಅವರ ಅನುಯಾಯಿಯೊಬ್ಬರು ಕೇಳಿದರು; ‘ಭಗವಾನ್, ನಿಜವಾದ ಧ್ಯಾನವೆಂದರೆ ಏನು?’ ಅದಕ್ಕೆ ರಮಣ ಮಹರ್ಷಿಗಳು ಉತ್ತರಿಸಿದರು; ‘ಚಿಂತನೆಯ ಉಗಮ ಸ್ಥಾನವನ್ನು ಏಕಾಗ್ರತೆಯಿಂದ ಗಮನಿಸಿಕೊಂಡಿರುವುದೇ ಧ್ಯಾನ.’ ಹಾಗಿದ್ದರೆ ಚಿಂತನೆಯ ಉಗಮ ಸ್ಥಾನ ಯಾವುದು? ಮೇಲ್ನೋಟಕ್ಕೆ ನಮ್ಮ ಮನಸ್ಸೇ ಚಿಂತನೆಯ ಉಗಮಸ್ಥಾನವೆಂದು ನಮಗೆ ಅನ್ನಿಸಬಹುದು. ಆದರೆ ಅದು ಆಗಿ ಹೋಗಿರುವ ಘಟನೆಗಳ ಉಗ್ರಾಣ. ನಿಜಕ್ಕಾದರೆ ಚಿಂತನೆಯ ಉಗಮ ಸ್ಥಾನವೇ ಆತ್ಮ. ಆ ಉಗಮ ಸ್ಥಾನವನ್ನು ಏಕಾಗ್ರತೆಯಿಂದ ಗಮನಿಸುವುದರಲ್ಲೇ ಆತ್ಮನ ಅಸ್ತಿತ್ವವನ್ನು ಗುರುತಿಸಲು ಪ್ರಯತ್ನಿಸಬೇಕು. ಆ ಮೂಲಕ ಪಡೆಯಲು ಸಾಧ್ಯವಾಗುವ ಆನಂದವೇ ನಿಜವಾದ ಆತ್ಮಾನಂದ.