ನಮ್ಮ ಮನಸ್ಸು ಹೇಗೋ ಹಾಗೆ ನಾವು ಮತ್ತು ನಮ್ಮ ಬದುಕು. ಅತ್ಯಂತ ಸೂಕ್ಷ ವಾಗಿರುವ ಮನಸ್ಸು ಶಕ್ತಿಶಾಲಿಯೂ ಹೌದು. ಆದರೂ ತಾನು ಅತ್ಯಂತ ದುರ್ಬಲನೆಂದು ತಿಳಿದು ಮುದುಡಿಕೊಳ್ಳುವಷ್ಟು ಮೌಡ್ಯವೂ ಅದರಲ್ಲಿದೆ. ಆದುದರಿಂದ ಮನಸ್ಸನ್ನು ಉಲ್ಲಸಿತವಾಗಿ ಇಟ್ಟುಕೊಳ್ಳುವುದೇ ಬದುಕಿನ ಒಂದು ಸವಾಲು. ಹೀಗೊಂದು ಲೋಕೋಕ್ತಿ ಇದೆ: ಉತ್ಸಾಹ-ಉಲ್ಲಾಸಗಳು ಬಾಳಿಗೆ ಮೆರುಗು ನೀಡುವಂತಹ ಶಕ್ತಿಗಳು, ನಿರಾಸೆ, ನಿರುತ್ಸಾಹಗಳನ್ನು ಬಾಳಿನಲ್ಲಿ ತುಂಬಿಕೊಂಡ ಮನುಷ್ಯನಿಂದ ಏನನ್ನೂ ಸಾಧಿಸುವುದಕ್ಕೆ ಆಗುವುದಿಲ್ಲ. ಆದರೂ ಮನಸ್ಸನ್ನು ಪ್ರಫುಲ್ಲವಾಗಿಡುವಲ್ಲಿ ನಾವು ಸೋಲುವವು. ಏಕೆ ? ಇಂದ್ರಿಯಗಳ ಕಾಮನೆಗಳಿಗೆ ನಾವು ಶರಣಾಗುವುದೇ ಇದಕ್ಕೆ ಕಾರಣ. ಪರಿಣಾಮವಾಗಿ ನಮ್ಮ ಅಸ್ತಿತ್ವವನ್ನು ನಾವು ದೇಹದೊಂದಿಗೆ ಮಾತ್ರವೇ ಗುರುತಿಸಿಕೊಳ್ಳುವೆವು, ನಾವು ದಿನನಿತ್ಯ ತೊಡಗಿಕೊಳ್ಳುವ ಚಟುವಟಿಕೆಗಳಲ್ಲಿ ನಮ್ಮನ್ನು ಸೂಜಿಗಲ್ಲಿನಂತೆ ಪ್ರಬಲವಾಗಿ ಸೆಳೆಯುವ ಅಂಶ ಯಾವುದು? ಅದು ಆಸೆಯಲ್ಲದೆ ಬೇರೇನೂ ಅಲ್ಲ, ಆಸೆಗಳು ಈಡೇರದೆ ಹೋದಾಗ ಮನಸ್ಸು ಪ್ರಕ್ಷುಬ್ಧಗೊಳ್ಳುವುದು ಸಹಜವೇ. ಯೋಗ ವಾಸಿಷ್ಠದಲ್ಲಿ ಒಂದು ಮಾತಿದೆ: ಮನುಷ್ಯನು ಪ್ರಾಜ್ಞನಿರಲಿ, ಶೂರನಿರಲಿ, ಸ್ಥಿರ ಬುದ್ದಿಯವನಿರಲಿ, ಆಸೆ ಎನ್ನುವುದು ಆತನನ್ನು ಹುಲು ಕಡ್ಡಿಯನ್ನಾಗಿ ಮಾಡುತ್ತದೆ ! ಆದರೂ ಬದುಕಿನಲ್ಲಿ ಯಾವುದೋ ಒಂದು ಲಾಭಕ್ಕಾಗಿ, ಪ್ರತಿಫಲಕ್ಕಾಗಿ ನಮ್ಮ ಸಮಸ್ತ ಕರ್ಮಗಳು ಉದ್ದೇಶಿತವಾಗಿವೆ ಎನ್ನುವುದರಲ್ಲಿ ಸಂದೇಹವಿಲ್ಲ. ಆ ಲಾಭ ಅಥವಾ ಪ್ರತಿಫಲವನ್ನು ಬೇಕಿದ್ದರೆ ಇಂದಿನ ಆಧುನಿಕ ಯುಗದಲ್ಲಿ ನಾವು ಮೋಟಿವೇಶನ್ ಎಂದು ತಿಳಿಯಬಹುದು. ಅದಿಲ್ಲದೆ ಹೋದರೆ ನಾವು ಪ್ರಾಯಶಃ ಯಾವುದೇ ಕರ್ಮದಲ್ಲಿ ತೊಡಗುವುದಿಲ್ಲ ಬದುಕಿನ ದುಃಖ ಅಡಗಿರುವುದೇ ಇಲ್ಲಿ. ಅದಕ್ಕೆಂದೇ ಶ್ರೀಕೃಷ್ಣ ಗೀತೆಯಲ್ಲಿ ಅರ್ಜುನನಿಗೆ ಹೇಳುತ್ತಾನೆ: ನನ್ನನ್ನಲ್ಲದೆ ನೀನು ಬೇರೇನನ್ನೂ ಅಪೇಕ್ಷಿಸದಿರು. ಆ ಮೂಲಕ ನಿನಗೆ ಸಿಗುವ ಆನಂದವೇ ಸಚ್ಚಿದಾನಂದ