ತ್ಯಾಗದ ಎರಡನೇ ಶ್ರೇಣಿಯಲ್ಲಿ ಬರುವ ವಿಚಾರ ಬಹಳ ಮುಖ್ಯವಾದದ್ದು. ಕರ್ಮಗಳನ್ನು ಸ್ವಾರ್ಥರಹಿತವಾಗಿ ಆಚರಿಸಬೇಕೆಂಬುದೇ ಇಲ್ಲಿರುವ ಸೂಚನೆ. ಬದುಕಿನ ಸಕಲ ಕರ್ಮಗಳನ್ನು ಸ್ವಾರ್ಥಪರತೆಯಿಂದ ಆಚರಿಸುವುದು ಮನುಷ್ಯನಿಗೆ ರೂಢಿಯಾಗಿ ಬಂದಿದೆ. ಹೆಂಡತಿ, ಮಕ್ಕಳು ಮತ್ತು ಐಶ್ವರ್ಯಾದಿ ಪ್ರಿಯವಸ್ತುಗಳು ತನಗೆ ಪ್ರಾಪ್ತವಾಗಬೇಕೆಂಬ ಸ್ವಾರ್ಥಪರ ಹೆಬ್ಬಯಕೆಯಲ್ಲಿ ಯಜ್ಞ ಯಾಗಾದಿ, ಹೋಮ-ಹವನಗಳನ್ನು ಮಾಡುವುದು ಸರ್ವಸಾಮಾನ್ಯ. ಹಾಗೆಯೇ ರೋಗ-ರುಜಿನಾದಿ ಸಂಕಟಗಳಿಂದ ಪಾರಾಗುವ ಉದ್ದೇಶದಿಂದಲೂ ಯಜ್ಞ, ದಾನ, ತಪಸ್ಸು ಮತ್ತು ಉಪಾಸನೆಗಳನ್ನು ನಡೆಸುವುದು ಲೋಕದಲ್ಲಿರುವ ರೂಢಿ. ಆದರೆ ಲೋಕ ಹಿತಕ್ಕಾಗಿ ಮಾಡುವ ಕರ್ಮಗಳು ಸಕಾಮ ಕರ್ಮಗಳೆನಿಸವು ಎನ್ನುವುದನ್ನೂ ನಾವು ತಿಳಿದಿರಬೇಕು. ಇಂದ್ರಿಯ ಸುಖದ ಬೆನ್ನುಹತ್ತಿರುವ ಮನುಜನಿಗೆ ಪ್ರಕೃತಿಯ ಮಾಯೆಯಲ್ಲಿ ಅನುಭವ ವೇದ್ಯವಾಗುವ ಸಕಲ ಸುಖ-ದುಃಖಗಳೇ ನಿಜವೆಂಬ ಭಾವನೆ ಇದೆ. ಆದುದರಿಂದಲೇ ಇಂದ್ರಿಯಾತೀತವಾದ ಭಗವದಾನಂದವು ಆತನ ಕಲ್ಪನೆಗೆ ನಿಲುಕುವುದಿಲ್ಲ. ಅಂತೆಯೇ ಭಗವಂತನಲ್ಲಿ ಆತನ ಮಂಡಿಸುವ ಬೇಡಿಕೆಗಳೆಲ್ಲವೂ ಐಹಿಕ ಸುಖ-ಸಂತೋಷಗಳಿಗμÉ್ಟೀ ಸೀಮಿತವಾಗಿರುತ್ತವೆ. ಯೋಗ ವಾಸಿಷ್ಠದಲ್ಲಿ ಒಂದು ಮಾತು ಬರುತ್ತದೆ: ಮನುಷ್ಯನು ಪ್ರಾಜ್ಞನಿರಲಿ, ಶೂರನಿರಲಿ, ಸ್ಥಿರ ಬುದ್ದಿಯವನೇ ಇರಲಿ – ಆಸೆ ಎನ್ನುವುದು ಆತನನ್ನು ಹುಲುಕಡ್ಡಿಯನ್ನಾಗಿ ಮಾಡುತ್ತದೆ. ಆಸೆ ನಮ್ಮಲ್ಲಿ ಉಂಟುಮಾಡುವ ದೌರ್ಬಲ್ಯ ಅತ್ಯಪಾರ, ನಮ್ಮನ್ನು ಗುಲಾಮನ ಮಟ್ಟಕ್ಕೂ ಅದು ಇಳಿಸಬಲ್ಲುದು. ಐಹಿಕ ಸುಖಭೋಗಗಳ ಆಸೆಯಿಂದ ಮುಕ್ತನಾಗದೆ ನಿಸ್ವಾರ್ಥ ಕರ್ಮದಲ್ಲಿ ನಿರತನಾಗುವುದು ಮನುಷ್ಯನಿಗೆ ಅಸಾಧ್ಯ. ಆದುದರಿಂದಲೇ ನಾವು ದೇವರನ್ನು ಸೇರಲು ಜಿತೇಂದ್ರಿಯರಾಗುವುದು ಅಗತ್ಯ.