Home » ಅಪನಂಬಿಕೆಯ ಸೌಧ
 

ಅಪನಂಬಿಕೆಯ ಸೌಧ

by Kundapur Xpress
Spread the love

ಜೀವಾತ್ಮನಾಗಿ ನಮ್ಮಲ್ಲಿ ಪ್ರತಿಷ್ಠಾಪಿತನಾಗಿರುವ ಪರಮಾತ್ಮನನ್ನು ಕಾಣಲು  ಪ್ರಯತ್ನಿಸುವ ಮೂಲಕವೇ ಇತರರನ್ನು, ಸಮಸ್ತ ಜೀವ ಸಂಕುಲವನ್ನು ಮತ್ತು ನಾವು ಜೀವಿಸಿಕೊಂಡಿರುವ ಈ ಪ್ರಪಂಚವನ್ನು ಪ್ರೀತಿಸಲು ನಮಗೆ ಸಾಧ್ಯವಾಗುತ್ತದೆ. ಆತನಲ್ಲಿ ಪ್ರತಿಷ್ಠಾಪಿತರಾಗುವ ಮೂಲಕವೇ ನಮ್ಮೊಳಗಿರುವ ದೇವರ ಅಂಶವನ್ನು ಕಾಣಲು ನಮಗೆ ಸಾಧ್ಯವಾಗುತ್ತದೆ. ಆದರೆ ಇದು ಸಾಧ್ಯವಾಗಬೇಕಾದರೆ ಎಲ್ಲಕ್ಕಿಂತ ಮೊದಲು ನಮ್ಮಲ್ಲಿನ ಸಂಶಯವನ್ನು, ಅಜ್ಞಾನವನ್ನು ಹಾಗೂ ಅಶ್ರದ್ಧೆಯನ್ನು ತೊಡೆದು ಹಾಕಬೇಕು. ಎಂದ ಮಾತ್ರಕ್ಕೆ ಅದು ಸುಲಭವೆಂದು ತಿಳಿಯಬಾರದು. ದೇವರ ಕುರಿತಾಗಿ ನಮ್ಮಲ್ಲಿ ಆಗೀಗ ಸಂಶಯಗಳು ತಲೆದೋರುತ್ತಲೇ ಇರುತ್ತದೆ ಏಕೆ? ದೇವರು ಮತ್ತು ನಮ್ಮ ನಡುವಿನ ಸಂಬಂಧವನ್ನು ನಾವು ಕೊಟ್ಟು-ತೆಗೆದುಕೊಳ್ಳುವ’ ವ್ಯಾವಹಾರಿಕ ನೆಲೆಯಲ್ಲಿ ರೂಢಿಸಿಕೊಂಡಿರುವುದರಿಂದಲೇ ‘ಸಂಶಯ’ವೆಂಬ ಭೂತ ನಮ್ಮನ್ನು ಕಾಡುತ್ತಿರುತ್ತದೆ. ಬದುಕಿನಲ್ಲಿ ಸಂಕಷ್ಟಗಳು ಒದಗಿದಾಗಲಂತೂ ದೇವರ ಮೇಲಿನ ನಮ್ಮ ನಂಬಿಕೆಗಳು ಕುಸಿಯತೊಡಗುತ್ತವೆ. ದೇವರೊಡನೆ ನಾವು ಬೇಡುವುದು ಐಹಿಕ ಪ್ರಪಂಚದ ಸುಖಭೋಗಗಳನ್ನು, ಐಶ್ವರ್ಯ, ಅಧಿಕಾರ, ಅಂತಸ್ತು ಮತ್ತು ಕೀರ್ತಿಯನ್ನೇ ವಿನಾ ದೇವರ ಪರಮ ಸಾನ್ನಿಧ್ಯವನ್ನಲ್ಲ ಅದುದರಿಂದಲೇ ನಮ್ಮೊಳಗೆ ಅಜ್ಞಾನ, ಸಂಶಯ, ಅಶ್ರದ್ಧೆ ಮನೆ ಮಾಡಿಕೊಂಡಿದೆ. ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ: ‘ಭಗವತ್ ವಿಷಯಗಳನ್ನು ತಿಳಿಯದ ಅಜ್ಞಾನಿ, ಶ್ರದ್ಧೆಯಿಲ್ಲದವನು ಹಾಗೂ ಸಂಶಯ ಸ್ವಭಾವದವನು ಪಾರಮಾರ್ಥಿಕವಾಗಿ ಭ್ರಷ್ಟನಾಗುತ್ತಾನೆ. ಅಂತಹವನಿಗೆ ಈ ಲೋಕವೂ ಇಲ್ಲ ಪರಲೋಕವೂ ಇಲ್ಲ. ಇಹ-ಪರ ಎರಡೂ ಕಡೆಗಳಲ್ಲಿ ಆತ ಭ್ರಷ್ಟನಾಗಿ ಹೋಗುತ್ತಾನೆ.’ ಆದುದರಿಂದ ಪರಮಶ್ರೇಷ್ಠವಾದ ಮತ್ತು ಸಚ್ಚಿದಾನಂದವನ್ನು ಕೊಡುವ ಆತ್ಮಜ್ಞಾನವನ್ನು ಪಡೆಯಲು ನಾವು ಮುಂದಾಗಬೇಕು. ಆತ್ಮಜ್ಞಾನದ ಬೆಳಕಲ್ಲಿ ನಮ್ಮೊಳಗಿನ ಸಂಶಯ, ಅಶ್ರದ್ಧೆ ಹಾಗೂ ಅಜ್ಞಾನಗಳೆಲ್ಲವೂ ನಾಶವಾಗುವುವು.

   

Related Articles

error: Content is protected !!