ಚಿಕ್ಕಮಗಳೂರು : ಚಿಕ್ಕಮಗಳೂರು ನಗರದಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂಬ ಆರೋಪ ಸಂಬಂಧ ನಗರ ಠಾಣೆಯ ಪಿ ಎಸ್ ಐ ಸೇರಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಿ ಎಸ್ಪಿ ಆದೇಶಿಸಿದ್ದು, ಬಂಧನದ ಭೀತಿಯಲ್ಲಿರುವ 6 ಮಂದಿ ಪೊಲೀಸರ ಪರ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ ಸಿಬ್ಬಂದಿಗಳು ಮೌನ ಪ್ರತಿಭಟನೆಗೆ ನಡೆಸಿದ್ದಾರೆ.ಹೆಲ್ಮೇಟ್ ವಿಚಾರಕ್ಕೆ ಯುವ ವಕೀಲ ಪ್ರೀತಮ್ ಎಂಬವರನ್ನು ರಸ್ತೆಯಲ್ಲಿ ಅಡ್ಡ ಹಾಕಿದ ಪೊಲೀಸರು ದಂಡ ಕಟ್ಟಿಸಿಕೊಳ್ಳುವ ನೆಪದಲ್ಲಿ ವಕೀಲನನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದಾರೆಂಬ ಪ್ರಕರಣ ಸಂಬಂಧ ನಗರ ಠಾಣೆಯ ಪಿಎಸ್ ಐ ಸೇರಿದಂತೆ ಆರು ಮಂದಿ ಪೊಲೀಸರನ್ನು ಎಸ್ಪಿ ಡಾ.ವಿಕ್ರಮ್ ಅಮಟೆ ಅವರು ಅಮಾನತು ಮಾಡಿದ್ದರು
ಅಮಾನತುಗೊಂಡಿರುವ ಪೊಲೀಸರು ಇದೀಗ ಬಂಧನ ಭೀತಿಯಲ್ಲಿದ್ದಾರೆ. ಈ ಘಟನೆಯಿಂದ ನೊಂದಿರುವ ಆರೋಪಿ ಪೊಲೀಸರ ಕುಟುಂಬಸ್ಥರು ಶನಿವಾರ ನಗರದ ಹನುಮಂತ ವೃತ್ತದಲ್ಲಿ ಧರಣಿ ನಡೆಸಿ ನಂತರ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿರುವ ಪೊಲೀಸರು ಹಾಗೂ ಅವರ ಕುಟುಂಬಸ್ಥರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಪೊಲೀಸರು ಹಾಗೂ ಕುಟುಂಬಸ್ಥರ ಅಳಲು ಕೇಳಿದ ಎಸ್ಪಿ ಡಾ.ವಿಕ್ರಮ್ ಅಮಟೆ, ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ್ದು, ನಿರಪರಾಧಿಗಳಿಗೆ ಕಾನೂನಿನ ರಕ್ಷಣೆ ಸಿಗಲಿದೆ ಎಂದು ಭರವಸೆ ನೀಡಿ, ಪೊಲೀಸರು ಕರ್ತವ್ಯಕ್ಕೆ ಮರಳಬೇಕೆಂದು ಸೂಚಿಸಿದರು.