Home » ಮೋಹಜಾಲ
 

ಮೋಹಜಾಲ

by Kundapur Xpress
Spread the love

ಕರ್ಮದಲ್ಲಿ ನಿರತರಾಗುವ ನಾವು ನಮ್ಮೆಲ್ಲ ಕಷ್ಟ-ಸುಖಗಳಿಗೆ ದೇವರನ್ನು ಹೊಣೆ ಮಾಡುವುದು ಎಷ್ಟು ಸರಿ? ಆತನ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವುದಾಗಲೀ ಆತನನ್ನು ದೂಷಿಸುವುದಾಗಲೀ ಎಷ್ಟು ಸರಿ? ಈ ಪ್ರಶ್ನೆಗೆ ಉತ್ತರವನ್ನು ನಮ್ಮೊಳಗೆ ನಾವೇ ಕಂಡುಕೊಳ್ಳಬೇಕು. ಸರ್ವವ್ಯಾಪಿಯಾದ ಪರಮಾತ್ಮನು ಯಾರ ಪಾಪ ಕರ್ಮವನ್ನಾಗಲೀ ತೆಗೆದುಕೊಳ್ಳುವುದಿಲ್ಲ ಎಂಬ ಮಾತನ್ನು ಗೀತೆಯಲ್ಲಿ ಶ್ರೀಕೃಷ್ಣನು ಖಡಾಖಂಡಿತವಾಗಿ ಹೇಳಿರುವನು. ನಮ್ಮ ನಮ್ಮ ಕರ್ಮಫಲವನ್ನು ನಾವು ಉಣ್ಣಲೇಬೇಕು. ‘ಮಾಡಿದ್ದುಣೋ ಮಹರಾಯ’ ಎಂಬ ಜನಪದ ನುಡಿ ನೇರವಾಗಿ ಬಂದದ್ದೇ  ಗೀತೆಯಿಂದ. ಒಳ್ಳೆಯ ಕರ್ಮಗಳನ್ನು ಮಾಡಿದರೆ ಒಳ್ಳೆಯ ಫಲ; ಕೆಟ್ಟ ಕರ್ಮಗಳನ್ನು ಮಾಡಿದರೆ ಕೆಟ್ಟಫಲ! ಲೆಕ್ಕಾಚಾರ ಬಹಳ ಸರಳ, ಆದರೆ ಚೋದ್ಯದ ಸಂಗತಿಯೆಂದರೆ ನಾವು ನಮ್ಮ ಬದುಕಿನಲ್ಲಿ ಒಳ್ಳೆಯದನ್ನು ಮಾತ್ರವೇ ಮಾಡಬೇಕೆಂದಾಗಲೀ ಕೆಟ್ಟದ್ದನ್ನು ಸರ್ವಥಾ ಮಾಡಬಾರದೆಂದಾಗಲೀ ದೇವರು ಯಾರಿಗೂ ಕಡ್ಡಾಯ ಮಾಡುವುದಿಲ್ಲ! ಯಾಕೆ ? ನಾವೆಲ್ಲರೂ ಒಳ್ಳೆಯ ರೀತಿಯಲ್ಲೇ ನಡೆದುಕೊಳ್ಳಬೇಕೆಂಬ ಆಸೆ ದೇವರಿಗೆ ಇಲ್ಲವೇ? ಇದ್ದಿದ್ದರೆ ಈ ಪ್ರಪಂಚಕ್ಕೆ ಈ ಬಗೆಯ ದುರ್ದೆಶೆ ಬರುತ್ತಿತ್ತೆ? ಪ್ರಶ್ನೆ ಬಹಳ ನೇರವಾಗಿದೆ. ಅದಕ್ಕೆ ಉತ್ತರ ಕೂಡ ಅಷ್ಟೇ ನೇರವಾಗಿದೆ. ಶ್ರೀಕೃಷ್ಣನೇ ಗೀತೆಯಲ್ಲಿ ಹೇಳುತ್ತಾನೆ: ಪರಮೇಶ್ವರನು ವಾಸ್ತವವಾಗಿ ಯಾರಿಗೂ ಕರ್ತೃತ್ವವನ್ನು ವ್ಯವಸ್ಥೆ ಮಾಡುವುದಿಲ್ಲ. ಕರ್ಮವನ್ನೂ ಗೊತ್ತುಪಡಿಸುವುದಿಲ್ಲ. ಹಾಗೆಯೇ ಕರ್ಮಗಳ ಫಲಸಂಯೋಗದ ವ್ಯವಸ್ಥೆಯನ್ನೂ ಮಾಡುವುದಿಲ್ಲ. ಆದರೆ ಪರಮಾತ್ಮನ ಶಕ್ತಿಯಿಂದ ಪ್ರಕೃತಿಯೇ ಪ್ರವರ್ತಿಸುತ್ತದೆ ಅರ್ಥಾತ್ ಗುಣಗಳೇ ತಮ್ಮ ಗುಣಗಳಂತೆ ಸ್ವಾಭಾವಿಕವಾಗಿ ವ್ಯವಹರಿಸುತ್ತವೆ. ಆದುದರಿಂದ ನಮ್ಮೆಲ್ಲ ಗುಣಕರ್ಮಗಳಿಗೆ ನಾವೇ ಹೊಣೆ. ಆತ್ಮನನ್ನು ಅಜ್ಞಾನವು ಮುಸುಕದಂತೆ ಎಚ್ಚರಿಕೆ ವಹಿಸಿದಲ್ಲಿ ಮಾತ್ರವೇ ನಾವು ಪ್ರಕೃತಿಯ ಮೋಹಜಾಲದಿಂದ ಪಾರಾಗಲು ಸಾಧ್ಯ!

   

Related Articles

error: Content is protected !!