ಸೋಮೇಶ್ವರ : ಕನ್ನಡ ಮತ್ತು ತುಳು ಭಾಷೆಯ ಮೇರು ಸಾಹಿತಿ, ಹಿರಿಯ ವಿದ್ವಾಂಸ, ಕರಾವಳಿ ಕರ್ನಾಟಕದ ಯಕ್ಷ ಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧಕ ಪ್ರೊ. ಅಮೃತ ಸೋಮೇಶ್ವರ ಅವರು ಶನಿವಾರ ಬೆಳಗ್ಗೆ ಸೋಮೇಶ್ವರದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅಮೃತ ಸೋಮೇಶ್ವರ ಅವರು ಕಥೆ, ಸಾಹಿತ್ಯ, ಕವನ, ಸಣ್ಣ ಕಥೆ, ಕಾದಂಬರಿ, ನಾಟಕ, ವ್ಯಕ್ತಿ ಚಿತ್ರಣ, ಜನಾಂಗದ ಪರಿಚಯ, ಸಾಹಿತ್ಯ ಪರಿಚಯ, ರೇಡಿಯೋ ರೂಪಕ, ನೃತ್ಯರೂಪಕ, ಸ್ವತಂತ್ರ ಗಾದೆ, ಶಬ್ದಕೋಶ, ಸಂಸ್ಕೃತಿ ಚಿಂತನ, ವಚನ ಸಾಹಿತ್ಯ, ಕುಚೋದ್ಯ ಕೋಶ, ಅಂಕಣ, ಲೇಖನ, ನವಸಾಕ್ಷರರಿಗೆ ಸಾಹಿತ್ಯ, ಯಕ್ಷಗಾನ, ವಿಚಾರ ವಿಮರ್ಶೆ ಸಂಪಾದನೆ, ಸಹ ಸಂಪಾದಿತ ಹಲವು ಕೃತಿಗಳನ್ನು ಹೊರತಂದಿದ್ದರು.
ತುಳುವಿನಲ್ಲಿ ಕವನ ಸಂಗ್ರಹ, ಪಾಡ್ಡನ ಸಂಗ್ರಹ, ನಾಟಕ, ಅನುವಾದಿತ ಕಾವ್ಯ, ನೃತ್ಯ ರೂಪಕ, ರೇಡಿಯೋ ರೂಪಕ, ಅನುವಾದಿತ ನಾಟಕ, ತುಳು ಜಾನಪದ ಕುರಿತಾದ ಸಂಶೋಧನೆ, ಸ್ವತಂತ್ರ ಗಾದೆ, ಭಕ್ತಿಗೀತೆ, ಭಾವಗೀತೆಗಳ ಕೃತಿಗಳನ್ನು ರಚಿಸಿದ್ದಾರೆ