ನಾವು ಜೀವಿಸಿಕೊಂಡಿರುವ ಈ ಪ್ರಪಂಚವೊಂದೇ ಸತ್ಯ ಎಂಬ ತಿಳಿವಳಿಕೆ ನಮ್ಮದಾಗಿರುವುದೇ ಎಲ್ಲ ಸಮಸ್ಯೆಗಳಿಗೆ ಕಾರಣ. ಈ ಭ್ರಮೆಯಿಂದಾಗಿಯೇ ಐಶಾರಾಮದ ಬದುಕೇ ನಮ್ಮ ಬಾಳಿನ ಗುರಿ ಎಂಬ ಭಾವನೆಯನ್ನು ನಾವು ಬೆಳೆಸಿಕೊಂಡಿರುತ್ತೇವೆ. ಅದಕ್ಕಾಗಿ ಅಧಿಕಾರ, ಅಂತಸ್ತು, ಐಶ್ವರ್ಯ, ಕೀರ್ತಿ ಅತ್ಯವಶ್ಯ ಎಂದೂ ನಾವು ಭಾವಿಸಿರುತ್ತೇವೆ. ಅದಿಲ್ಲದಿದ್ದರೆ ನಾವು ಬದುಕಿಯೂ ಸತ್ತಂತೆ ಎಂದು ತಿಳಿಯುತ್ತೇವೆ. ಈ ಜನ್ಮದಲ್ಲಿ ನಾವು ಅನುಭವಿಸುತ್ತಿರುವ ಸುಖಭೋಗಗಳು ಮುಂದಿನ ಜನದಲ್ಲೂ ಪ್ರಾಪ್ತವಾಗಬೇಕೆಂಬ ಅತ್ಯಾಸೆಯಲ್ಲಿ ಪುಣ್ಯ ಸಂಪಾದನೆಗೆ ತೊಡಗುತ್ತೇವೆ. ಯಾವ ಮಾರ್ಗದಲ್ಲಾದರೂ ಹಣವನ್ನು ಸಂಪಾದಿಸಿ ಪೂಜೆ-ಪುರಸ್ಕಾರ, ಯಾಗ, ಯಜ್ಞ, ದಾನ-ಧರ್ಮ ಎಂಬಿತ್ಯಾದಿ ಉದ್ದೇಶಗಳಿಗೆ ಅದನ್ನು ಇತರರು ಅಸೂಯೆ ಪಡುವಂತೆ ವಿನಿಯೋಗಿಸುತ್ತೇವೆ. ಪುಣ್ಯಗಳಿಕೆಯನ್ನು ಗುರಿಯಾಗಿಟ್ಟುಕೊಂಡು ಪಾಪ ಮಾರ್ಗದಲ್ಲಿ ಸಾಗಿದರೆ ಫಲವೇನು? ನಾವಿದನ್ನು ಯೋಚಿಸುವುದೇ ಇಲ್ಲ. ಗುರಿ ಪವಿತ್ರವಾಗಿದ್ದರೆ ಸಾಲದು, ಅದನ್ನು ತಲುಪುವ ಮಾರ್ಗವೂ ಪವಿತ್ರವಾಗಿರಬೇಕು. ಮಾರ್ಗ ಅಪವಿತ್ರವಾಗಿದ್ದರೆ ಗುರಿಯು ತನ್ನ ಪಾವಿತ್ರ‍್ಯವನ್ನು ಸಹಜವಾಗಿಯೇ ಕಳೆದುಕೊಳ್ಳುತ್ತದೆ. ನಿಜಕ್ಕಾದರೆ ನಾವು ಸಾಗುವ ಮಾರ್ಗವೇ ನಮ್ಮ ಗುರಿಯ ಪಾವಿತ್ರ‍್ಯವನ್ನೂ ಹಿರಿಮೆಯನ್ನೂ ರೂಪಿಸುತ್ತವೆ. ಖ್ಯಾತ ಪಾಶ್ಚಾತ್ಯ ಚಿಂತಕ ಎಲಿಯಟ್ ಒಂದೆಡೆ ಹೇಳುತ್ತಾರೆ: ನಾವು ನಮ್ಮ ಕಾರ್ಯಗಳನ್ನು ತೀರ್ಮಾನಿಸುತ್ತೇವೆ; ಅವು ನಮ್ಮ ಯೋಗ್ಯತೆಯನ್ನು ತೀರ್ಮಾನಿಸುತ್ತವೆ! ಸ್ವಾರ್ಥಪರರಾಗಿ ಪುಣ್ಯಗಳಿಕೆಯೊಂದನ್ನೇ ಉದ್ದೇಶವಾಗಿಟ್ಟುಕೊಂಡಾಗ ನಮಗೆದುರಾಗುವ ಅಡ್ಡ ಮಾರ್ಗಗಳು ಹಲವು. ಅವುಗಳ ಆಕರ್ಷಣೆಯೂ ಪ್ರಬಲ. ಏಕೆಂದರೆ ಅವು ಬೇಗನೆ ನಮ್ಮನ್ನು ಗುರಿಯತ್ತ ಕೊಂಡೊಯ್ಯುತ್ತವೆ ಎಂದು ನಾವು ಭ್ರಮಿಸುತ್ತೇವೆ. ದೇವರನ್ನು ತಲುಪುವ ಸತ್ಕರ್ಮಗಳ ಮಾರ್ಗ ಪುಣ್ಯಗಳಿಕೆಗಿಂತಲೂ ಹಿರಿದಾದ ಗುರಿಯತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಆ ಗುರಿಯಲ್ಲಿ ನಾವು ಅಂತಿಮವಾಗಿ ದೇವರನ್ನೇ ಸೇರುವೆವು