ಅಬುಧಾಬಿಯ ನೂತನ ಸ್ವಾಮಿನಾರಾಯಣ’ ಮಂದಿರ ಜಗತ್ತನ್ನೇ ಒಗ್ಗೂಡಿಸುವ ಸೌಹಾರ್ದತೆ ಪ್ರತೀಕ. ಅಯೋಧ್ಯೆಯಲ್ಲಿ ನಾವು ಅನುಭವಿಸಿದ ಖುಷಿ ಅಬುಧಾಬಿಯಲ್ಲಿ ಇಮ್ಮಡಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ. ಅಲ್ಲದೆ ಸಂಯುಕ್ತ ಅರಬ್ ಸಂಸ್ಥಾನದಲ್ಲಿ (ಯುಎಇ) ಮೊದಲ ಹಿಂದೂ ದೇಗುಲದ ಉದ್ಘಾಟನೆ ಮಾಡಿದ್ದು ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.
ದೇವಸ್ಥಾನ ಉದ್ಘಾಟನೆ ಬಳಿಕ ನಡೆದ ಭವ್ಯ ಸಮಾರಂಭದಲ್ಲಿ ಬುಧವಾರ ರಾತ್ರಿ ಮಾತನಾಡಿದ ಅವರು ಭಾರತದಲ್ಲಿ ಶತಮಾನದ ಕನಸು ರಾಮಮಂದಿರ ನಿರ್ಮಾಣದಿಂದ ನನಸಾಯಿತು. ಎಲ್ಲಾ ಭಾರತೀಯರೂ ಇನ್ನೂ ಸಹ ಈ ಉತ್ಕಟ ಭಾವನೆಯನ್ನು ಅನುಭವಿಸುತ್ತಿದ್ದಾರೆ. ಈ ವೇಳೆ ಅಬುಧಾಬಿಯಲ್ಲೂ ಮಂದಿರ ನಿರ್ಮಾಣವಾಗಿರುವುದು ಈ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. ಎರಡೂ ದೇವಸ್ಥಾನಗಳ ಉದ್ಘಾಟನೆಯಲ್ಲಿ ಭಾಗಿಯಾಗಿರುವುದು ನನ್ನ ಅದೃಷ್ಟ’ ಎಂದು ಹರ್ಷಿಸಿದರು. ‘ಬಾಪ್ಸ್ ದೇವಸ್ಥಾನದ ನಿರ್ಮಾಣ ಭಾರತದೊಂದಿಗೆ ನೀವು ಹೊಂದಿರುವ ಪ್ರೀತಿ ಮತ್ತು ದೂರದೃಷ್ಟಿಯ ಪ್ರತೀಕ. ಇದು ಕೇವಲ ಪೂಜಾ ಸ್ಥಳವಷ್ಟೇ ಅಲ್ಲದೇ, ಮಾನವತೆಯ, ಜಗತ್ತನ್ನು ಜೋಡಿಸುವ ಕೋಮು ಸೌಹಾರ್ದತೆಯ ಪ್ರತೀಕ ಎಂದು ನಾನು ಭಾವಿಸುತ್ತೇನೆ’ ಎಂದು ಮೋದಿ ನುಡಿದರು