ಅಹಮದಾಬಾದ್: ಕೇವಲ ಮೂರು ಅಡಿ ಎತ್ತರ ಹಾಗೂ 18 ಕೇಜಿ ತೂಕ ಹೊಂದಿರುವ ಯುವಕನೊಬ್ಬ ಗುಜರಾತಿನಲ್ಲಿ ವೈದ್ಯನಾಗಿ ಸೇವೆ ಆರಂಭಿಸಿದ್ದಾನೆ. ಈತ ವಿಶ್ವದಲ್ಲೇ ಅತ್ಯಂತ ಕುಳ್ಳ ಡಾಕ್ಟರ್ ಎಂಬ ದಾಖಲೆಗೆ ಭಾಜನನಾಗಿದ್ದಾನೆ. ಗುಜರಾತಿನ ಭಾವ್ನಗರ ವೈದ್ಯ ಕಾಲೇಜಿನಲ್ಲಿ ವೃತ್ತಿ ಆರಂಭಿಸಿರುವ ಈ ವೈದ್ಯನ ಹೆಸರು ಗಣೇಶ್ ಬಾರಯ್ಯ. ವಯಸ್ಸು 22. ಆಸ್ಪತ್ರೆಯ ಮಂಚದಷ್ಟು ಮಾತ್ರವೇ ಎತ್ತರ ಇರುವ ಗಣೇಶ್, ಹಾಸಿಗೆ ಮೇಲೆ ಮಲಗಿರುವ ರೋಗಿಯನ್ನು ಕುರ್ಚಿ ಹಾಕಿಕೊಂಡು, ತಪಾಸಣೆ ನಡೆಸುತ್ತಾರೆ.
ಅವರಿಗೆ ಗ್ರಾಮೀಣ ಪ್ರದೇಶದಲ್ಲಿ ಚಿಕಿತ್ಸೆ ನೀಡಬೇಕೆಂಬ ಮಹದಾಸೆ ಇದೆಯಂತೆ. ಗಣೇಶ್ ಅವರು ಕುಬ್ಬ ರೋಗದಿಂದ ಬಳಲುತ್ತಿದ್ದಾರೆ. ವಾರ್ಡ್ಗಳಿಗೆ ಗಣೇಶ್ ಹೋದರೆ ಅವರನ್ನು ರೋಗಿಗಳು, ಕುಟುಂಬಸ್ಥರು ಅನುಮಾನದಿಂದ ನೋಡುತ್ತಾರೆ. ಅವರನ್ನು ಸಮಾಧಾನಪಡಿಸಿ ಗಣೇಶ್ ಚಿಕಿತ್ಸೆ ಆರಂಭಿಸುತ್ತಾರೆ. ಮೂಲತಃ ಭಾವ್ನಗರ ಜಿಲ್ಲೆಯ ಹಳ್ಳಿವರಾದ ಗಣೇಶ್ ಅವರ ತಂದೆ ವಿಠಲ್ ರೈತ. ತಾಯಿ ದೇವುಬೆನ್- ವಿಠಲ್ ದಂಪತಿಗೆ ಒಟ್ಟು 8 ಮಕ್ಕಳು. ಅದರಲ್ಲಿ 7 ಹೆಣ್ಣುಮಕ್ಕಳು. ಅವರು ಹೆಚ್ಚು ಓದಲಿಲ್ಲ. ಎಲ್ಲರಿಗೂ ಮದುವೆಯಾಗಿದೆ. ತಮ್ಮ ಏಕಮಾತ್ರ ಪುತ್ರ ವೈದ್ಯ ಆಗಲಿ ಎಂಬ ಆಸೆ ತಾಯಿಗೆ ಇತ್ತು. ಅದರಂತೆ ಕಷ್ಟಪಟ್ಟು ಓದಿ 12ನೇ ತರಗತಿಯಲ್ಲಿ ಶೇ.87 ಅಂಕ ಗಳಿಸಿ ನೀಟ್ ಪರೀಕ್ಷೆ ಪಾಸು ಮಾಡಿದರು. ಆದರೆ ಎಂಬಿಬಿಎಸ್ ಸೀಟು ನೀಡಲು ಗುಜರಾತ್ ಸರ್ಕಾರ ನಿರಾಕರಿಸಿತು. ಸುಪ್ರೀಂಕೋರ್ಟ್ನಲ್ಲಿ ಬಳಿಕ ಕಾನೂನು ಹೋರಾಟ ನಡೆಸಿ ವೈದ್ಯ ಕೋರ್ಸ್ ಮುಗಿಸಿದ್ದಾರೆ.