ಹೊಸದಿಲ್ಲಿ : ಭಾರತದ ವೈವಿಧ್ಯತೆಯನ್ನು ಅತ್ಯಂತ ಹೀನಾಯವಾಗಿ ಅಪಹಾಸ್ಯ ಮಾಡಿರುವ ಕಾಂಗ್ರೆಸ್‌ನ ಸಾಗರೋತ್ತರ ಘಟಕಾಧ್ಯಕ್ಷ ಸ್ಯಾಮ್ ಪಿತ್ರೋಡಾ ಓರ್ವ ಜನಾಂಗೀಯ ಭೇದವಾದಿ ಎಂದು ಛೀಮಾರಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿ, ಮೈಬಣ್ಣದ ಆಧಾರದಲ್ಲಿ ತಮ್ಮನ್ನು ಅಪಮಾನಿಸುವ ಯತ್ನಗಳನ್ನು ಭಾರತೀಯರು ಖಂಡಿತ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಪಿತ್ರೋಡಾನ ಪ್ರಸ್ತುತ ಹೇಳಿಕೆಗೆ ಬಿಜೆಪಿ ನಾಯಕರಿಂದ ಮಾತ್ರವಲ್ಲ, ಭಾರತದಾದ್ಯಂತ ಎಲ್ಲಾ ವರ್ಗಗಳ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಥರ್ಡ್ ಅಂಪೈರ್, ಶೆಹಜಾದಾನ ಅಂಕಲ್: ಕಾಂಗ್ರೆಸ್‌ನ ಶೆಹಜಾದಾಗೆ ಸೈದ್ಧಾಂತಿಕ ಬೋಧನೆ ಮಾಡುವ ಓರ್ವ ಅಂಕಲ್ ಅಮೆರಿಕದಲ್ಲಿದ್ದಾರೆಂಬುದು ನನ್ನ ಅರಿವಿಗೆ ಬಂದಿದೆ. ಈ ಅಂಕಲ್ ಕ್ರಿಕೆಟ್‌ನಲ್ಲಿನ ಥರ್ಡ್ ಅಂಪೈರ್ ಥರ, ಶೆಹಜಾದಾ ಸಲಹೆ ಪಡೆಯೋದೇ ಈ ಅಂಕಲ್‌ನಿಂದ. ಭಾರತದಲ್ಲಿ ಯಾರು ಕಪ್ಪು ಚರ್ಮದವರಿದ್ದಾರೋ ಅವರು ಆಫ್ರಿಕನ್ನರು ಎಂದು ಈ ಜನಾಂಗೀಯ ಭೇದವಾದಿ ಅಂಕಲ್ ಹೇಳಿದ್ದಾರೆ. ತನ್ಮೂಲಕ ಈತ ಭಾರತೀಯರನ್ನು ಚರ್ಮದ ಬಣ್ಣದ ಆಧಾರದಲ್ಲಿ ವಿಭಜಿಸುತ್ತಿರುವುದು, ಹಳಿಯು ತ್ತಿರುವುದು ಅಕ್ಷಮ್ಯವೆಂದು ಪ್ರಧಾನಿ ಟೀಕಿಸಿದರು.