ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಶಾಮೀಲಾಗಿದ್ದು, ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ಬೆಂಗಳೂರು, ರಾಮನಗರ, ನೆಲಮಂಗಲ, ಮೈಸೂರು, ದೊಡ್ಡಬಳ್ಳಾ ಪುರ, ಹಾಸನ, ಮಂಡ್ಯ, ದೇವನಹಳ್ಳಿ ಸೇರಿ * ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದವು. ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನಾಕಾರರು ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳನ್ನು ತಡೆದರು. ಡಿಕೆಶಿ ಭಾವಚಿತ್ರವಿದ್ದ ಪ್ರತಿಕೃತಿಗೆ ಚಪ್ಪಲಿ, ಸಿಡಿ ಹಾರ ಹಾಕಿ, ಬೆಂಕಿ ಹಚ್ಚಿದರು. ದೇವನಹಳ್ಳಿಯ ಹೊಸ ಬಸ್ ನಿಲ್ದಾಣ ದಲ್ಲಿ, ನಾಗಮಂಗಲದಲ್ಲಿ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ದೊಡ್ಡಬಳ್ಳಾಪುರದಲ್ಲಿ ಪ್ರವಾಸಿ ಮಂದಿರದ ಬಳಿ ಧರಣಿ ನಡೆಸಿದರು. ಮೈಸೂರಿನಲ್ಲಿ ಮೈಮುಲ್ನಿಂದ ಡೀಸಿ ಹೊಸ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಯಿತು.