ಹೊಸದಿಲ್ಲಿ: ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ಮುಗಿಯುತ್ತಿದ್ದಂತೆ, ಹೊರಬಿದ್ದಿರುವ ಮತದಾನೋತ್ತರ ಸಮೀಕ್ಷೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 3ನೇ ಬಾರಿಗೆ ಅಧಿಕಾರಕ್ಕೆ ಬರುವ ಮೂಲಕ ಹ್ಯಾಟ್ರಿಕ್ ಸಾಧಿಸಲಿದೆ. ಬಿಜೆಪಿ ನೇತೃತ್ವದ ಎನ್ ಡಿ ಎ 350 ಸ್ಥಾನಗಳನ್ನು ದಾಟಲಿದ್ದು, ಕಾಂಗ್ರೆಸ್ ನೇತೃತ್ವದ ಐಎನ್ಡಿಐಎ ಕೂಟ 125-150 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಹೇಳಿವೆ. ಈ ಬಾರಿ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಮಹತ್ವದ ಸಾಧನೆಗೈಯ್ಯಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
2019ರ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳಲ್ಲಿ 13ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 306ಸ್ಥಾನಗಳನ್ನು ಗಳಿಸಬಹುದು ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟ 120ಸ್ಥಾನ ಗಳಿಸಬಹುದು ಎಂದಿದ್ದವು. ಅಂತಿಮ ಫಲಿತಾಂಶ ಬಂದಾಗ ಬಿಜೆಪಿಯೇ 303ಸ್ಥಾನ ಗಳಿಸಿ ಎನ್ಡಿಎ 353 ಸ್ಥಾನಗಳನ್ನು ಗೆದ್ದಿತ್ತು.ಯುಪಿಎ 93ಸ್ಥಾನಗಳನ್ನು ಮಾತ್ರವೇ ಗಳಿಸಿತ್ತು. ಅದರಲ್ಲೂ ಕಾಂಗ್ರೆಸ್ 52ಸ್ಥಾನಗಳಿಗೆ ಕುಸಿತ ಕಂಡಿತ್ತು