ಹೊಸದಿಲ್ಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಭಾನುವಾರ ನಡೆಯಲಿರುವ ಪದಗ್ರಹಣ ಸಮಾರಂಭಕ್ಕೆ ದಕ್ಷಿಣ ಏಷ್ಯಾದ ಉನ್ನತ ನಾಯಕರನ್ನು ಆಹ್ವಾನಿಸಲಾಗಿದ್ದು, ಇದರಿಂದ ಕೇಂದ್ರದ ಮೊದಲು ನೆರೆ ನೀತಿ ಪ್ರತಿಬಿಂಬವಾಗಲಿದೆ.
ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಬಾಂಗ್ಲಾದೇಶ ಪ್ರಧಾನಿ ಪಾಲ್ಗೊಳ್ಳುವುದಾಗಿ ಈಗಾಗಲೇ ದೃಢಪಡಿಸಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘ ಅವರ ಕಚೇರಿಯ ಮಾಧ್ಯಮ ವಿಭಾಗ ಕಾರ್ಯಕ್ರಮಕ್ಕೆ ಹಾಜರಾಗಲು ಆಹ್ವಾನ ಸ್ವೀಕರಿಸಿದ್ದು, ಚುನಾವಣಾ ವಿಜಯಕ್ಕಾಗಿ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದ್ದಾರೆ.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ ಮೊದಲ ವಿದೇಶಿ ನಾಯಕರಲ್ಲಿ ಒಬ್ಬರಾಗಿದ್ದರು. ಇದು ಉಭಯ ನಾಯಕರ ನಡುವಿನ ಆತ್ಮೀಯತೆ ಮತ್ತು ವೈಯಕ್ತಿಕ ಬಾಂಧವ್ಯ ಪ್ರತಿಬಿಂಬಿಸುತ್ತದೆ. ಬಾಂಗ್ಲಾದೇಶ ಮಾಧ್ಯಮಗಳ ಪ್ರಕಾರ, ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿ ಶೇಖ್ ಹಸೀನಾ ದಿಲ್ಲಿಗೆ ಆಗಮಿಸಲಿದ್ದಾರೆ.
ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ, ಭೂತಾನ್ ಪ್ರಧಾನಿ ಟೆರಿಂಗ್ ಟೋಬೈ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಲ್ನಾಥ್ ಅವರಿಗೆ ಔಪಚಾರಿಕ ಆಹ್ವಾನಗಳನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.