ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಸೇರಿದ್ದ ಕರ್ನಾಟಕದ ಐವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಿದ್ದು ಎಲ್ಲ ಸಚಿವರೂ ಉತ್ತಮ ಖಾತೆಗಳನ್ನೇ ಪಡೆದಿದ್ದಾರೆ, ಎಚ್.ಡಿ. ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ ಅವರು ಸಂಪುಟ ದರ್ಜೆ ಸಚಿವರಾಗಿ ಹಾಗೂ ವಿ. ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರು ರಾಜ್ಯ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಸೋಮವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಮೋದಿ-2 ಸರ್ಕಾರದಲ್ಲಿ ಹೊಂದಿದ್ದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆಯನ್ನೇ ಮತ್ತೆ ನೀಡಲಾಗಿದೆ. ಆದರೆ ಈ ಹಿಂದೆ ಸಂಸದೀಯ ಹಾಗೂ ಕಲ್ಲಿದ್ದಲುಖಾತೆ ಹೊಂದಿದ್ದ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ (ಪಡಿತರ) ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ.
ಇದೇ ಮೊದಲ ಬಾರಿ ಕೇಂದ್ರ ಮಂತ್ರಿ ಆದ ಮಂಡ್ಯ ಜೆಡಿಎಸ್ ಸಂಸದ ಎಚ್.ಡಿ.’ ಕುಮಾರಸ್ವಾಮಿ ಅವರಿಗೆ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ನೀಡಲಾಗಿದೆ
ಮೋದಿ-2 ಸರ್ಕಾರದಲ್ಲಿ ಕೃಷಿ ಖಾತೆ ಹಾಗೂ ಆಹಾರ ಸಂಸ್ಕರಣೆ ರಾಜ್ಯ ಸಚಿವೆ ಆಗಿದ್ದ ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಖಾತೆ ನೀಡಲಾಗಿದೆ. ಮೊದಲ ಬಾರಿ ಕೇಂದ್ರ ಮಂತ್ರಿ ಆಗಿರುವ ತುಮಕೂರು ಸಂಸದ ವಿ. ಸೋಮಣ್ಣ ಅವರಿಗೆ ಜಲಶಕ್ತಿ ಸಚಿವಾಲಯ ಮತ್ತು ರೈಲ್ವೇ ಸಚಿವಾಲಯದ ರಾಜ್ಯ ಸಚಿವ ಹುದ್ದೆ ನೀಡಲಾಗಿದೆ