Home » ಹೆಸಕುತ್ತೂರು ಶಾಲೆಯಲ್ಲಿ ಸಂಸತ್ ಚುನಾವಣೆಯ ಕಾವು
 

ಹೆಸಕುತ್ತೂರು ಶಾಲೆಯಲ್ಲಿ ಸಂಸತ್ ಚುನಾವಣೆಯ ಕಾವು

by Kundapur Xpress
Spread the love

ಕೋಟ : ಕೆಲವರಿಗದು ಮೊದಲ ಮತದಾನದ ಸಂಭ್ರಮವಾದರೆ ಇನ್ನೂ ಕೆಲವರಿಗೆ ಇದು ಮರುಕಳಿಸಿದ ಅನುಭವ. ಆದರೂ ಇವಿಎಂ ಮತಯಂತ್ರದ ಯಾವ ಗುಂಡಿ ಒತ್ತಿ ಮತದಾನ ಮಾಡಬೇಕೆಂಬ ಬಗ್ಗೆ ಇನ್ನೂ ಗೊಂದಲ. ಕೊನೆಗೂ ಮತಯಂತ್ರದ ಬೀಪ್ ಸೌಂಡ್ ಕೇಳಿದಾಗ ಏನೋ ಸಾಧಿಸಿದ ನಗು ಅರಳಿದ ಮುಖ. ಇದು ಕಂಡದ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಇಲ್ಲಿ ನಡೆದ ಶಾಲಾ ಸಂಸತ್ ಚುನಾವಣೆಯ ಮತದಾನದ ಸಂದರ್ಭದಲ್ಲಿ. ಹೊರಗೆ ಸುರಿಯುತ್ತಿರುವ ಬಿರುಮಳೆಯನ್ನು ಲೆಕ್ಕಿಸದೆ ಮಕ್ಕಳೆಲ್ಲರೂ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.

2024-25 ನೇ ಸಾಲಿನ ಶಾಲಾ ಮಂತ್ರಿಮಂಡಲ ರಚನೆಯ ಪ್ರಯುಕ್ತ ಒಂದು ವಾರದ ಮುಂಚೆಯೇ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ನಾಮಪತ್ರ ಸಲ್ಲಿಸಲು, ಪರಿಶೀಲನೆ, ಹಿಂತೆಗೆತ, ಚುನಾವಣಾ ಪ್ರಚಾರ, ಚುನಾವಣೆ, ಮತ ಎಣಿಕೆ ಎಲ್ಲದಕ್ಕೂ ದಿನಾಂಕಗಳನ್ನು ಘೋಷಿಸಲಾಗಿತ್ತು. ಅಭ್ಯರ್ಥಿಗಳು ಸೂಚಿತ ಠೇವಣಿ ಹಣವನ್ನು ಕಟ್ಟಿ, ನಿಗದಿತ ನಮೂನೆಯಲ್ಲಿ ನಾಮಪತ್ರ ತುಂಬಿ ಚುನಾವಣಾಧಿಕಾರಿಗೆ ಸಲ್ಲಿಸಿದ್ದರು. ಶಾಲಾ ನಾಯಕ ಮತ್ತು ಉಪ ನಾಯಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಒಟ್ಟು 15 ಅಭ್ಯರ್ಥಿಗಳಲ್ಲಿ 4 ಅಭ್ಯರ್ಥಿಗಳು ನಾಮಪತ್ರ ವಾಪಾಸ್ ಪಡೆದಿದ್ದರು. ಎರಡು ದಿನಗಳ ಬಿರುಸಿನ ಚುನಾವಣಾ ಪ್ರಚಾರದ ನಂತರ ಜೂನ್ 10 ರಂದು ಚುನಾವಣೆಗೆ ವೇದಿಕೆ ಸಜ್ಜಾಗಿತ್ತು. ಎಲ್ಲಾ ಅಭ್ಯರ್ಥಿಗಳನ್ನು ಪ್ರತಿನಿಧಿಸುವ ಏಜೆಂಟ್ ರುಗಳು ಉಪಸ್ಥಿತರಿದ್ದರು

ಎಲ್ಲಾ ಮತದಾರ ವಿದ್ಯಾರ್ಥಿಗಳು ಗುರುತುಪತ್ರ ತೋರಿಸಿ ಮತ ಚಲಾಯಿಸಿದರು. ಮೊದಲ ಮತದಾನ ಅಧಿಕಾರಿ ಮತದಾರರ ಗುರುತು ದಾಖಲಿಸಿದರೆ ಎರಡನೇ ಮತದಾನಾಧಿಕಾರಿ ಮತದಾರರಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಿ, 17 (ಂ) ಮತದಾರರ ರಿಜಿಸ್ಟರ್ ನಲ್ಲಿ ಸಹಿ ಪಡೆದು ಮತಪತ್ರ ನೀಡಿದರು. ಮೂರನೇ ಮತದಾನ ಅಧಿಕಾರಿ ಮತಪತ್ರ ಪಡೆದು ಇ ವಿ ಎಂ ಕಂಟ್ರೋಲ್ ಯೂನಿಟ್ ನಲ್ಲಿ ವೋಟ್ ನೀಡಿದರು. ಪ್ರತ್ಯೇಕ ಕಂಪಾರ್ಟ್ಮೆಂಟ್ ನಲ್ಲಿ ಇರಿಸಲಾಗಿದ್ದ ಬ್ಯಾಲೆಟ್ ಯೂನಿಟ್ ನಲ್ಲಿ ಮಕ್ಕಳು ತಮಗೆ ತಮ್ಮ ಆಯ್ಕೆಯ ಅಭ್ಯರ್ಥಿಯ ಎದುರಿನ ನೀಲಿ ಗುಂಡಿ ಒತ್ತಿ ಮತ ಚಲಾಯಿಸಿದರು

ಎಲ್ಲಾ ವಿದ್ಯಾರ್ಥಿಗಳು ಮತ ಚಲಾಯಿಸಿದ ನಂತರ ಅಭ್ಯರ್ಥಿಗಳು ಹಾಗೂ ಏಜೆಂಟ್ ರ ಸಮ್ಮುಖದಲ್ಲಿ ಮತ ಎಣಿಕೆ ನಡೆಸಲಾಯಿತು. ಶಾಲಾ ನಾಯಕ ಸ್ಥಾನಕ್ಕೆ 7ನೇ ತರಗತಿಯ ಗಗನ್ ತನ್ನ ಸಮೀಪದ ಪ್ರತಿಸ್ಪರ್ಧಿ ಮಾನ್ಯ ಳಿಗಿಂತ 4 ಮತಗಳ ಅಂತರದಲ್ಲಿ ಗೆದ್ದು ಶಾಲಾ ನಾಯಕನಾಗಿ ಆಯ್ಕೆಯಾದರು. ಶಾಲಾ ನಾಯಕನ ಸ್ಥಾನಕ್ಕೆ 6 ನೇ ತರಗತಿಯ ರನ್ಯಾ ತನ್ನ ಸಮೀಪದ ಪ್ರತಿಸ್ಪರ್ಧಿ ಶ್ರೀವತ್ಸನಿಗಿಂತ 6 ಮತಗಳ ಅಂತರದಲ್ಲಿ ಗೆದ್ದು ಶಾಲಾ ಉಪ ನಾಯಕಿಯಾಗಿ ಆಯ್ಕೆಯಾದರು.

ವಿಜೇತ ಅಭ್ಯರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ ಪ್ರಮಾಣ ಪತ್ರ ನೀಡಿದರು. ಶಾಲಾ ಶಿಕ್ಷಕರಾದ ಸಂಜೀವ ಎಂ, ಜಯಲಕ್ಷ್ಮಿ ಬಿ, ವಿಜಯಾ ಆರ್, ವಿಜಯ ಶೆಟ್ಟಿ, ರವೀಂದ್ರ ನಾಯಕ್, ಸ್ವಾತಿ ಬಿ, ಮಧುರ ಮತಗಟ್ಟೆ ಸಿಬ್ಬಂದಿಯಾಗಿ ಸಹಕರಿಸಿದರು. ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

   

Related Articles

error: Content is protected !!