ಬೆಂಗಳೂರು : ತೈಲ ದರ ಏರಿಕೆ ವಿರೋಧಿಸಿ ಮತ್ತು ಈ ದರ ಏರಿಕೆಯನ್ನು ವಾಪಸ್ ಪಡೆಯುವಂತೆ ಆಗ್ರ ಹಿಸಿ ಬಿಜೆಪಿಯು ಇಂದು ಗುರುವಾರ ಎರಡನೇ ಹಂತದ ಹೋರಾಟ ನಡೆಸಲು ನಿರ್ಧರಿಸಿದೆ.
ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ರಸ್ತೆತಡೆ ಆಂದೋಲನ ನಡೆಸಲಿದ್ದಾರೆ ಅಲ್ಲದೆ, ರಾಜಧಾನಿ ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವ ದಲ್ಲಿ ಪಕ್ಷದ ರಾಜ್ಯ ಕಚೇರಿಯಿಂದ ವಿಧಾನ ಸೌಧದವರೆಗೆ ಸೈಕಲ್ ಜಾಥಾ ನಡೆಯಲಿದೆ. ವಿಧಾನಪರಿಷತ್ತಿನ ಬಿಜೆಪಿಯ ಮುಖ್ಯ ಸಚೇತಕ ಎನ್.ರವಿಕುಮಾರ್ ಬುಧವಾರ ಈ ಕುರಿತು ವಿವರ ನೀಡಿದರು.
ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಜನರ ಜೀವನವನ್ನೇ ಕಷ್ಟದಾಯಕವನ್ನಾಗಿ ಮಾಡಿದೆ. ಜನರ ಬದುಕನ್ನೇ ದುಸ್ತರವನ್ನಾಗಿ ಮಾಡಿದ ಜನವಿರೋಧಿ ಸರ್ಕಾರ ಇದು. ರೈತ ವಿರೋಧಿ, ಎಸ್ಸಿ, ಎಸ್ಟಿ, ಒಬಿಸಿಗಳ ವಿರೋಧಿ ಸರಕಾರ ಇದಾಗಿದ್ದು, ಈ ಸರ್ಕಾರ ಕೂಡಲೇ ತೈಲ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಆಸ್ತಿ ತೆರಿಗೆಯನ್ನು ಶೇ.20ರಿಂದ ಶೇ.120 ವರೆಗೆ ಹೆಚ್ಚಿಸಿದ್ದಾರೆ. ಮೋಟಾರು ವಾಹನ ತೆರಿಗೆಯನ್ನು ಶೇ.40ರಿಂದ ಶೇ.80ರಷ್ಟು ಹೆಚ್ಚಿಸಿದ್ದಾರೆ. ಅಬಕಾರಿ ತೆರಿಗೆ (ಮದ್ಯ) ಶೇ.20ರಿಂದ ಶೇ.400ವರೆಗೆ ಹೆಚ್ಚಳವಾಗಿದೆ ಎಂದರು.