ಕಾರ್ಕಳ: ಅಂಜಲ್ ಮೀನು ಕಳವು ಪ್ರಕರಣವೊಂದು ಕಾರ್ಕಳ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಳಿಕ ಅಂಜಲ್ ಮೀನು ಮಾಲಿಕ, ಕದ್ದವನು ಹಾಗೂ ಅದನ್ನು ತಿಂದವನ ನಡುವೆ ರಾಜಿ ಸಂಧಾನ ನಡೆದಿದೆ.
ಜೂ.9ಕ್ಕೆ ಕಾರ್ಕಳದ ಮೀನು ಮಾರುಕಟ್ಟೆಯ ವ್ಯಾಪಾರಿ ಮಾಲಾ ಎಂಬವರ ಬಳಿ ದುಬಾರಿ ಅಂಜಲ್ ಮೀನಿಗಾಗಿ ಗ್ರಾಹಕರು ಕೇಳಿದ್ದರು. ಅದರಂತೆ ಮಾಲಾ 6500 ರು. ಮೌಲ್ಯದ ಅಂಜಲ್ ಮೀನನ್ನು ಫ್ರಿಡ್ಜ್‌ನಲ್ಲಿಟ್ಟಿದ್ದರು. ಬೆಳಗ್ಗೆ ಫ್ರಿಡ್ಜ್ ನೋಡಿದಾಗ ಮೀನು ಕಳುವಾಗಿತ್ತು. ಈ ಬಗ್ಗೆ ಮಾಲಾ ಪುತ್ರ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಅನುಮಾನದ ಮೇರೆಗೆ ಸೂರಜ್ ಎಂಬಾತನನ್ನು ವಿಚಾರಿಸಿದ್ದು, ಆತ ಕುಡಿತಕ್ಕಾಗಿ ಅಂಜಲ್ ಮೀನನ್ನು ಕದ್ದು ಕೇವಲ 140 ರು.ಗೆ ಹೂವಿನ ವ್ಯಾಪಾರಿಗೆ ಮಾರಾಟ ಮಾರಿದ್ದಾಗಿ ತಿಳಿಸಿದ್ದಾನೆ. ಹೂವಿನ ವ್ಯಾಪಾರಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಆತ ಕೂಡ ಸತ್ಯ ಒಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಮೂವರನ್ನು ಕರೆಸಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿದ್ದಾರೆ.