ನವದೆಹಲಿ : 18ನೇ ಲೋಕಸಭೆಗೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯುವ ಮುನ್ನಾದಿನ ಕಾಂಗ್ರೆಸ್ ಪಕ್ಷವು ಯುವ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಪ್ರತಿಪಕ್ಷ ನಾಯಕರನ್ನಾಗಿ ಘೋಷಿಸಿದೆ. ಇದರಿಂದಾಗಿ ಸದನದಲ್ಲಿ ಇನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಅವರ ನಡುವಿನ ಸಮರಕ್ಕೆ ವೇದಿಕೆ ಸಜ್ಜಾದಂತಾಗಿದೆ.
ಮಂಗಳವಾರ ಸಂಜೆ ದಿಲ್ಲಿಯಲ್ಲಿ ನಡೆದ ವಿಪಕ್ಷಗಳ ಇಂಡಿಯಾ ಕೂಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಬಳಿಕ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಲೋಕಸಭೆಯ ಹಂಗಾಮಿ ಅಧ್ಯಕ್ಷರಿಗೆ ಪತ್ರ ಮುಖೇನ ಈ ಮಾಹಿತಿ ನೀಡಿ, ರಾಹುಲ್ ರನ್ನು ವಿಪಕ್ಷ ನಾಯಕ ಎಂದು ಪರಿಗಣಿಸುವಂತೆ ಕೋರಿದರು. ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಪ್ರಕಟಿಸಿದರು.
ರಾಹುಲ್ ಇತ್ತೀಚೆಗೆ ಈ ಹುದ್ದೆ ವಹಿಸಿಕೊಳ್ಳಲು ನಿರಾಸಕ್ತಿ ತೋರಿದ್ದರು ಎಂದು ವರದಿಯಾಗಿತ್ತು. ಹೀಗಾಗಿ ಶಶಿ ತರೂರ್ ಸೇರಿ ಅನ್ಯರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಆದರೆ ಕೊನೆಗೆ ಅದು ಹೇಗೋ ರಾಹುಲ್ ಈ ಹುದ್ದೆಗೆ ಒಪ್ಪಿದ್ದಾರೆ. ಹಿಂದಿನ ಲೋಕಸಭೆಯಲ್ಲಿ ಅಧೀರ್ ರಂಜನ್ ಚೌಧರಿ ಕಾಂಗ್ರೆಸ್ ನಾಯಕರಾಗಿದ್ದರು. ಆದರೆ ಕಾಂಗ್ರೆಸ್‌ಗೆ ಕಮ್ಮಿ ಸ್ಥಾನ ಬಂದಿದ್ದರಿಂದ ವಿಪಕ್ಷನಾಯಕ ಸ್ಥಾನ ಲಭಿಸಿರಲಿಲ್ಲ. ಈ ಸಲ 99 ಸ್ಥಾನ ಬಂದ ಕಾರಣ ಪ್ರಮುಖ ಪ್ರತಿಪಕ್ಷ ಪಟ್ಟ ದೊರಕಿದೆ