ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮೇಕೆದಾಟು, ಭದ್ರಾ ಮೇಲ್ದಂಡೆ, ಮೆಟ್ರೋ 3ನೇ ಹಂತ ಸೇರಿ ರಾಜ್ಯದ ಪ್ರಮುಖ ಅಭಿವೃದ್ಧಿ ಮತ್ತು ನೀರಾವರಿ ಯೋಜನೆಗಳ ಕುರಿತು ಚರ್ಚೆ: ನಡೆಸಿದರು. ರಾಜ್ಯ ಪ್ರಸ್ತಾಪ ಸಲ್ಲಿಸಿರುವ ಈ ಯೋಜನೆಗಳಿಗೆ ಆದಷ್ಟು ಶೀಘ್ರ ಅನುಮೋದನೆ ನೀಡುವಂತೆ ಮತ್ತು ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ಬೆಂಗಳೂರಿಗೆ ಕುಡಿಯುವ ನೀರೊದಗಿಸುವ ಹಾಗೂ 400 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಮೇಕೆದಾಟು ಅಣೆಕಟ್ಟು ಯೋಜನೆಯ 9000 ಕೋಟಿ ರು. ಡಿಪಿಆರ್ಗೆಗೆ ಕೇಂದ್ರ ಜಲ ಆಯೋಗ ದಿಂದ ಅನುಮೋದನೆ ಬಾಕಿ ಇದೆ. ಈ ಯೋಜನೆ ಕುರಿತು ಖುದ್ದು ಆಸಕ್ತಿ ವಹಿಸುವಂತೆ ಸಿದ್ದರಾಮಯ್ಯ ಅವರು ಪ್ರಧಾನಿ ಅವರ ಜತೆಗಿನ 40 ನಿಮಿಷಗಳ ಭೇಟಿ ವೇಳೆ ಮನವಿ ಮಾಡಿದರುಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ 2023-2024ರಲ್ಲಿ ಘೋಷಿಸಿದಂತೆ 5300 ಕೋಟಿ ರು. ಬಿಡುಗಡೆ ಹಾಗೂ ಕಳಸಾ- ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಶೀಘ್ರ ತೀರುವಳಿ ನೀಡುವಂತೆ ಜಲಶಕ್ತಿ ಸಚಿವಾಲಯ ಮತ್ತು ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಧಿಕಾರಿಗಳಿಗೆ ಸೂಚಿಸುವಂತೆಯೂ ಇದೇ ವೇಳೆ ಕೋರಿದರು.