ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ಪ್ರತಿ ವರ್ಷದ ಜೂ.25 ಅನ್ನು ಸಂವಿಧಾನ ಹತ್ಯಾ ದಿನವೆಂದು ಆಚರಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ತುರ್ತು ಪರಿಸ್ಥಿತಿ ವೇಳೆ ನೊಂದ ಮತ್ತು ಪ್ರಜಾಪ್ರಭುತ್ವವನ್ನು ಪುನರ್ಸ್ಥಾಪನೆಗಾಗಿ ಹೋರಾಟ ನಡೆಸಿದ ಪ್ರತಿಯೊಬ್ಬರ ಗೌರವಕ್ಕಾಗಿ ಜೂ.25ನ್ನು ಸಂವಿಧಾನ ಹತ್ಯಾ ದಿನ ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.
ಅಷ್ಟೇ ಅಲ್ಲ ಸಂವಿಧಾನ ಹತ್ಯಾ ದಿನದ ಮೂಲಕ ಪ್ರತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರತಿ ಭಾರತೀಯನು ನಮ್ಮ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ನಡೆಸುವ ಸ್ಫೂರ್ತಿಯ ಜ್ವಾಲೆಯಾಗಿ ಸದಾ ಬೆಳಗುವಂತೆ ಮಾಡುತ್ತದೆ. ಈ ಮೂಲಕ ಕಾಂಗ್ರೆಸ್ನಂಥ ಸರ್ವಾಧಿಕಾರ ಧೋರಣೆಯುಳ್ಳ ಪಕ್ಷಗಳು ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮಾಡಲಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.