ಹೊಸದಿಲ್ಲಿ : ಭಾರತದ ಪರಮವೈಭವಕ್ಕಾಗಿ ಸಂಕಲ್ಪ ತೊಟ್ಟು ಸಮಗ್ರ ಭಾರತೀಯರ ಉನ್ನತಿಗಾಗಿ ಶ್ರಮಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಲ್ಲಿ ಸರಕಾರಿ ಉದ್ಯೋಗಿಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಕೇಂದ್ರ ಸರಕಾರ ತೆಗೆದುಹಾಕಿದೆ. ಸರಕಾರದ ಈ ನಿರ್ಧಾರವು ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸುವಂತಹದ್ದಾಗಿದೆ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಸ್ವಾಗತಿಸಿವೆ.
ಹಿಂದಿನ ಕಾಂಗ್ರೆಸ್ ಸರಕಾರ 1966ರಲ್ಲಿ ತನ್ನ ಸ್ವಾರ್ಥ ರಾಜಕೀಯ ದುರುದ್ದೇಶಗಳಿಗಾಗಿ ಹೇರಿದ್ದ ನಿರ್ಬಂಧ ಇದಾಗಿತ್ತು ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಪೀಯೂಷ್ ಗೋಯಲ್ ಹೇಳಿದ್ದಾರೆ. ಕಾಂಗ್ರೆಸ್ ಸದಾ ರಾಷ್ಟ್ರೀಯವಾದಿ ಸಂಘಟನೆಗಳ ವಿರುದ್ಧ ಋಣಾತ್ಮಕ ಮಾನಸಿಕತೆಯನ್ನು ಬೆಳೆಸಿಕೊಂಡಿದ್ದು, ದೇಶದಲ್ಲಿ ಇಂತಹ ಯಣಾತ್ಮಕ ಚಿಂತನೆಗಳಿಗೆ ಅವಕಾಶವಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು
ಸೂಕ್ತ ನಿರ್ಧಾರ: ಆರೆಸ್ಸೆಸ್
ಸರಕಾರದ ಈ ನಿರ್ಧಾರ ಸೂಕ್ತವಾಗಿದ್ದು, ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ ಎಂಬುದಾಗಿ ಆರೆಸ್ಸೆಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದು, ಕೇಂದ್ರ ಸರಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ಆರೆಸ್ಸೆಸ್ ರಾಷ್ಟ್ರದ ಪುನರುತ್ಥಾನ ಕಾರ್ಯದಲ್ಲಿ ಮತ್ತು ಸಮಾಜದ ಸೇವೆಯಲ್ಲಿ ಕಳೆದ 99 ವರ್ಷಗಳಲ್ಲಿ ನಿರಂತರವಾಗಿ ತೊಡಗಿಕೊಂಡು ಬಂದಿದೆ ಎಂದು ಅವರು ನುಡಿದರು.