ಕಾಠ್ಮಂಡು : ವಿಮಾನವೊಂದು ಟೇಕಾಫ್ ಆದ ಬೆನ್ನಲ್ಲೇ ಪತನಗೊಂಡು 18 ಜನರು ಸಾವನ್ನಪ್ಪಿದ ಭೀಕರ ಘಟನೆ ಬುಧವಾರ ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ನಡೆದಿದೆ. ಆದರೆ ಪವಾಡ ಸದೃಶ್ಯ ರೀತಿಯಲ್ಲಿ ವಿಮಾನದ ಪೈಲಟ್ ಬಚಾವ್ ಆಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಟೇಕಾಫ್ ವೇಳೆ ವಿಮಾನವು ಟೇಬಲ್ ಟಾಪ್ ರನ್ವೇನಿಂದ ಜಾರಿ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದೆ.
ಸೂರ್ಯ ಏರ್ಲೈನ್ಸ್ ಗೆ ಸೇರಿದ ಬೊಂಬಾರ್ಡಿಯರ್ ಸಿಆರ್ ಜೆ-200 ವಿಮಾನವು ಇಬ್ಬರು ಸಿಬ್ಬಂದಿ, 17 ಪ್ರಯಾಣಿಕರನ್ನು ಹೊತ್ತು ಬುಧವಾರ ಕಾಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತ್ತು. ಆದರೆ ರನ್ವೇನಲ್ಲಿ ಜಾರಿ ಸಾವರಿಸಿಕೊಂಡು ಮೇಲೆ ಹಾರಿದೆ. ಆದರೆ ಮೇಲೆ ಏರುವ ವೇಳೆ ಎಡಕ್ಕೆ ತಿರುಗುವ ಬದಲು ಬಲಕ್ಕೆ ತಿರುಗಿದ್ದು ಸ್ವಲ್ಪ ಮೇಲೆ ಏರುತ್ತಲೇ ದಿಢೀರನೆ ಪತನಗೊಂಡಿದೆ. ರಭಸಕ್ಕೆ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದು, ಅದರೊಳಗಿದ್ದ 15 ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಪೈಲಟ್ ಮಾತ್ರ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.