ಲಡಾಖ್ : ಭಯೋತ್ಪಾದನೆ ಮತ್ತು ಮೋಸದ ಸಮರ ಮೂಲಕ ತನ್ನ ಅಸ್ತಿತ್ವ ಉಳಿಸಲು ಹೆಣಗಾಡುತ್ತಿರುವ ಪಾಕಿಸ್ತಾನ ಪ್ರಚೋದಿತ ಎಲ್ಲಾ ಸ್ವರೂಪದ ಭಯೋತ್ಪಾದನೆಯನ್ನು ನಮ್ಮ ವೀರ ಯೋಧರು ದಿಟ್ಟತನದಿಂದ, ಸರ್ವಶಕ್ತಿಯಿಂದ ಸಂಪೂರ್ಣ ಮಟ್ಟ ಹಾಕಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾರ್ಗಿಲ್ ವಿಜಯೋತ್ಸವದ 25ನೇ ವಾರ್ಷಿಕೋತ್ಸವ ಸಂದರ್ಭ ಘೋಷಿಸಿದ್ದಾರೆ.
ಶುಕ್ರವಾರ ಕಾರ್ಗಿಲ್ಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಿದರು. 1999ರ ಕಾರ್ಯಾಚರಣೆಯಲ್ಲಿ ನಮ್ಮ ಸತ್ಯದ ಬಲದೆದುರು ಪಾಕಿಸ್ತಾನದ ಅಸತ್ಯ ಮತ್ತು ಭೀತಿವಾದಗಳು ಮಂಡಿಯೂರಿದ್ದವು. ಆದರೂ ಗತ ಇತಿಹಾಸದಿಂದ ಪಾಕಿಸ್ತಾನ ಏನೇನೂ ಪಾಠ ಕಲಿತಿಲ್ಲ
ಭಯೋತ್ಪಾದನೆಯ ರೂವಾರಿಗಳಿಗೆ ನನ್ನ ಧ್ವನಿ ಸ್ಪಷ್ಟ ಕೇಳುವಂತಹ ಜಾಗದಲ್ಲಿ ನಾನಿರುವೆ. ನಿಮ್ಮ ವಿಚ್ಛಿದ್ರಕಾರಿ ದುರುದ್ದೇಶಗಳು ಎಂದಿಗೂ ಖಂಡಿತ ಫಲಿಸುವುದಿಲ್ಲ ಎಂದು ಭೀತಿವಾದದ ರೂವಾರಿಗಳಿಗೆ ನಾನು ಸಾರಿ ಹೇಳುತ್ತಿರುವೆ ಎಂದು ಪ್ರಧಾನಿ ಮೋದಿ ಮಿಲಿಟರಿ ಉನ್ನತಾಧಿಕಾರಿಗಳ ಸಮಕ್ಷಮ ಎಚ್ಚರಿಕೆ ನೀಡಿದರು.