ಜನಜಾಗೃತಿಗಾಗಿ ಪ್ರಗತಿಯಾತ್ರೆ-ವಿಜಯ ಸಂಕಲ್ಪ ಯಾತ್ರೆ
ಅಸೆಂಬ್ಲಿ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರ ಜಾಗೃತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸಲು ‘ವಿಜಯ ಸಂಕಲ್ಪ ಯಾತ್ರೆ-ಪ್ರಗತಿ ಯಾತ್ರೆ ಮಾ.11 ರಿಂದ 25ರ ವರೆಗೆ ದ.ಕ.ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದ್ದಾರೆ.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ವಿಜಯ ಸಂಕಲ್ಪ ಯಾತ್ರೆ ಹಾಗೂ ಪ್ರಗತಿ ಯಾತ್ರೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ನಾಯಕರಾದ ಈಶ್ವರಪ್ಪ, ಅಶೋಕ್, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಡಾ.ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ನಾಲ್ಕು ವಿಭಾಗದಲ್ಲಿ ಸಂಚರಿಸಲಿರುವ ಈ ಯಾತ್ರೆಯುದ್ಧಕ್ಕೂ ರೋಡ್ಶೋ ಹಾಗೂ ಸಾರ್ವಜನಿಕ ಸಮಾವೇಶ, ಧಾರ್ಮಿಕ ಸ್ಥಳಗಳ ಭೇಟಿ, ಸುದ್ದಿಗೋಷ್ಠಿ ಇರಲಿದೆ ಎಂದರು. ದ.ಕ.ದಲ್ಲಿ ಮುಖಂಡರಾದ ಆರ್.ಅಶೋಕ್ ಮತ್ತು ಈಶ್ವರಪ್ಪ ನೇತೃತ್ವದಲ್ಲಿ ರಥಯಾತ್ರೆ ನಡೆಯಲಿದೆ,
ಈಗಾಗಲೇ ಆರು ಎಲ್ಇಡಿ ವಾಹನಗಳು ಪ್ರತಿ ಅಸೆಂಬ್ಲಿ ಕ್ಷೇತ್ರಗಳಲ್ಲಿ ಸಂಚರಿಸುತ್ತಿದ್ದು, ಚುನಾವಣೆ ವರೆಗೆ ಸರ್ಕಾರದ ಸಾಧನೆ ಸಾರುವ ಪ್ರಗತಿ ರಥ ಸಂಚರಿಸಲಿದೆ. ಚುನಾವಣೆ ಘೋಷಣೆ ಸಮೀಪಿಸುತ್ತಿದ್ದು, ಚುನಾವಣೆ ಎದುರಿಸಲು ಬಿಜೆಪಿ ಸಮರ್ಥವಾಗಿದೆ. ಬೂತ್ನಿಂದ ಜಿಲ್ಲಾ ಹಂತದ ವರೆಗೆ ಕಾರ್ಯಕರ್ತರ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದರು. ಮುಖಂಡರಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ, ರವಿಶಂಕರ್ ಮಿಜಾರ್, ದೇವದಾಸ ಶೆಟ್ಟಿ, ಸಂದೇಶ್ ಶೆಟ್ಟಿ ಇದ್ದರು