ಢಾಕಾ : ಬಾಂಗ್ಲಾ ದೇಶದಲ್ಲಿ ಮೀಸಲು ನೀತಿ ವಿರೋಧಿಸಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು ಭಾನುವಾರ ನಡೆದ ಪ್ರತಿಭಟನೆ ಹಿಂಸಾರೂಪ ತಾಳಿದೆ ಪ್ರತಿಭಟನೆಯಲ್ಲಿ 90ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ದೇಶಾದ್ಯಂತ ಕರ್ವ್ಯೂ ಜಾರಿಗೊಳಿಸಲಾ ಗಿದೆ. 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿಯಾದವರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ನಿರ್ಧಾರವನ್ನು ವಿದ್ಯಾರ್ಥಿ ಒಕ್ಕೂಟ ಬಲವಾಗಿ ವಿರೋಧಿಸುತ್ತಿದೆ.
ಸರಕಾರ ನಿರ್ಧರಿಸಿದ್ದ ಶೇ.30ರಷ್ಟು ಮೀಸಲನ್ನು ಸುಪ್ರೀಂ ಕೋರ್ಟ್ ಶೇ.5ಕ್ಕೆ ಇಳಿಸಿದೆ. ಆದರೆ ಇದರ ಬಳಿಕವೂ ಹೋರಾಟ ಮುಂದುವರಿದಿದೆ. ಪ್ರತಿಭಟನಾಕಾರರು ಸರಕಾರಿ ಕಚೇರಿಗಳನ್ನು ಧ್ವಂಸಗೊಳಿಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಅಶ್ರುವಾಯು, ಗ್ರೆನೇಡ್ ಬಳಸಿದ್ದಾರೆ. ಮೀಸಲು ವಿವಾದ ಕುರಿತಂತೆ ಚರ್ಚೆ ನಡೆಸಲು ಪ್ರಧಾನಿ ಶೇಖ್ ಹಸೀನಾ ನೀಡಿದ ಆಹ್ವಾನವನ್ನು ಹೋರಾಟಗಾರರು ತಿರಸ್ಕರಿಸಿದ್ದಾರೆ.