ಬೆಂಗಳೂರು :ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ತನಿಖೆ ಹಾಗೂ ಅಭಿಯೋಜನೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಅನುಮತಿ ನೀಡಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಖಾಸಗಿ ವ್ಯಕ್ತಿಗಳ ದೂರು ಆಧರಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17- ಎ ಅನ್ವಯ ತನಿಖೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023ರ ಸೆಕ್ಷನ್ 2180 ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆರೋಪದ ತನಿಖೆಗಾಗಿ ಅಭಿಯೋಜನೆಗೆ ಅನುಮತಿ ನೀಡಿ ಶನಿವಾರ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳಿಗೆ ಪತ್ರ ಬರೆದು ರಾಜ್ಯಪಾಲರ ಆದೇಶವನ್ನು ರವಾನಿಸಿದ್ದಾರೆ
ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಬಿಜೆಪಿ ಸರ್ಕಾರದ ‘ದ್ವೇಷದ ಅಸ್ತ್ರ’ ಎಂದು ರಾಷ್ಟ್ರಮಟ್ಟದಲ್ಲಿ ಬಿಂಬಿಸಲು ಹಾಗೂ ರಾಜ್ಯಪಾಲರ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಅಲ್ಲದೆ ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬಾರದು. ಯಾವ ಪರಿಸ್ಥಿತಿ ಉಂಟಾದರೂ ‘ಎಲ್ಲರೂ ಒಗ್ಗಟ್ಟಾಗಿ ಅವರ ಬೆನ್ನಿಗೆ ನಿಲ್ಲಬೇಕು ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ. ಮತ್ತೊಂದೆಡೆ ಬಿಜೆಪಿ, ಜೆಡಿಎಸ್ ನಾಯಕರು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ