ಬೆಂಗಳೂರು : ಇಷ್ಟೊಂದು ಕಡಿಮೆ ಅವಧಿಯಲ್ಲಿ ರಾಜ್ಯದ ಜನರ ವಿಶ್ವಾಸ ಮತ್ತು ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿರುವ ರಾಜ್ಯ ಸರ್ಕಾರ ಇದ್ದರೆ ಅದು ದುಷ್ಟ ಕಾಂಗ್ರೆಸ್ ಸರ್ಕಾರ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಕಾನೂನು ಪ್ರಕೋಷ್ಠದ ಮೊದಲನೇ ರಾಜ್ಯ ಕಾರ್ಯಕಾರಣಿ ಉದ್ಘಾಟಿಸಿದ ಅವರು, ಕಳೆದ ಎರಡು ತಿಂಗಳುಗಳಿಂದ ರಾಜ್ಯದಲ್ಲಿ ಆಡಳಿತ ಪಕ್ಷವಿದೆ, ಸರ್ಕಾರವಿದೆ ಎಂಬುದನ್ನು ಜನರೇ ಮರೆತು ಹೋಗಿದ್ದಾರೆ ಎಂದರು.
ಕಾನೂನು ಪ್ರಕೋಷ್ಠದ ಪ್ರಾಮುಖ್ಯತೆ ಇಂದಿನ ಕಾಲಘಟ್ಟದಲ್ಲಿ ಮಹತ್ವದ್ದಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಿಂದ ಆರಂಭವಾದ ನ್ಯಾಯದ ಪರವಾಗಿ ನಿಲ್ಲುವಂತಹ ಹೋರಾಟ ಇವತ್ತಿನ ವರೆಗೂ ಮುಂದುವರಿದಿದೆ. ಪ್ರಸಕ್ತ ರಾಜ್ಯದ ರಾಜಕಾರಣವನ್ನು ಗಮನಿಸುವುದಾದರೆ, ದಿನ ಬೆಳಗಾದರೆ ಹೋರಾಟಗಳು ನಡೆಯುತ್ತಲೇ ಇದೆ. ನಮ್ಮ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವುದು, ಅವರನ್ನು ಠಾಣೆಗೆ ಕರೆದೊಯ್ಯುವುದು ಎಲ್ಲವೂ ನಡೆಯುತ್ತಿದೆ. ರಾಜಕೀಯ ಪಕ್ಷವಾಗಿ ಕಾನೂನು ಪ್ರಕೋಷ್ಠದ ಸಹಕಾರವಿಲ್ಲದೇ ನಾವು ನಡೆಯುವುದಕ್ಕೆ ಸಾಧ್ಯವಿಲ್ಲಎಂದು ಬಿ.ವೈ. ವಿಜಯೇಂದ್ರ ಹೇಳಿದರು
ಪ್ರಕೋಷ್ಠಗಳ ರಾಜ್ಯ ಸಂಯೋಜಕ ದತ್ತಾತ್ರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಕಾನೂನು ಪ್ರಕೋಷ್ಠ ಸಹ ಸಂಚಾಲಕ, ಲಕ್ಷ್ಮಣ್ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯರಾದ ಕೆ.ಪಿ. ವಿಶ್ವನಾಥ್, ಯಶ್ವಂತ್, ವೀಣಾ ಅರುಣ್, ಬಿ.ವಿ. ಶ್ರೀನಿವಾಸ್ ಉಪಸ್ಥಿತರಿದ್ದರು