ಪಾಲಕ್ಕಾಡ್ : ಬಹು ಚರ್ಚಿತ ಜಾತಿ ಗಣತಿಗೆ ಆರೆಸ್ಸೆಸ್ ಬೆಂಬಲ ಸೂಚಿಸಿದೆ. ಇದೊಂದು ಸೂಕ್ಷ್ಮ ಸಂಗತಿಯಾಗಿದ್ದು, ಜಾತಿ ಗಣತಿಯ ದತ್ತಾಂಶಗಳು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕೇ ಹೊರತು ಚುನಾವಣೆ ಲಾಭಕ್ಕೆ ದುರ್ಬಳಕೆಯಾಗಬಾರದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಚ್ಚರಿಸಿದೆ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವಂತೆ ಕಾಂಗ್ರೆಸ್ ನೇತೃತ್ವದಲ್ಲಿ ‘ಐಎನ್ಡಿಐಎ’ ಪಕ್ಷಗಳು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿರುವ ಹೊತ್ತಿನಲ್ಲಿಯೇ ಆರೆಸ್ಸೆಸ್ನಿಂದ ಈ ಹೇಳಿಕೆ ಹೊರಬಿದ್ದಿದೆ.ಆ ಕೇರಳದ ಪಾಲಕ್ಕಾಡ್ನಲ್ಲಿ ನಡೆಯುತ್ತಿರುವ 3 ದಿನಗಳ ‘ಸಮನ್ವಯ ಬೈಠಕ್’ನಲ್ಲಿ ಆರೆಸ್ಸೆಸ್ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್, ”ಹಿಂದೂ ಸಮಾಜಕ್ಕೆ ಜಾತಿ ಸಂಬಂಧಿತ ಅಂಶಗಳು ಸೂಕ್ಷ್ಮ ವಿಚಾರವೆನಿಸಿವೆ. ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಇದು ಮುಖ್ಯವಾಗಿದೆ. ಹಿಂದುಳಿದಿರುವ ನಿರ್ದಿಷ್ಟ ಸಮುದಾಯ ಅಥವಾ ಜಾತಿಗಳ ಏಳಿಗೆಗೆ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರಕಾರಕ್ಕೆ ದತ್ತಾಂಶಗಳ ಅಗತ್ಯವಿದೆ. ಈ ವಿಚಾರದಲ್ಲಿ ಜಾತಿ ಗಣತಿಗೆ ಆರೆಸ್ಸೆಸ್ ಬೆಂಬಲವಿದೆ. ಆದರೆ ಇದು ರಾಜಕೀಯ ಅಸ್ತ್ರವಾಗಿ ಬಳಕೆಯಾಗಬಾರದು,” ಎಂದರು,