ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ಆಟೋ ರಿಕ್ಷಾಗಳಿಗೆ ಗುರುತು ಸಂಖ್ಯೆಯಿರುವ ಸ್ಟಿಕ್ಕರ್ ಅನ್ನು ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ರವಿವಾರ ಬೆಳಿಗ್ಗೆ ಸಂಚಾರ ಠಾಣೆ ಎದುರು ವಿತರಿಸಿದರು.
ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಗೊಂದಲ ತಪ್ಪಿಸಲು, ಚಾಲಕರು ಮತ್ತು ಆಟೋ ರಿಕ್ಷಾದ ಸಂಪೂರ್ಣ ವಿವರಗಳನ್ನೊಳಗಂಡ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡು ಯಾವುದೇ ರೀತಿಯ ಸಂದರ್ಭದಲ್ಲಿ ಅದರ ಉಪಯೋಗಪಡೆಯಲು, ಅನಧೀಕೃತ ಆಟೋ ರಿಕ್ಷಾಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಗುರುತು ಸಂಖ್ಯೆ ಸಹಕಾರಿಯಾಗಲಿದೆ. ಆಟೋ ರಿಕ್ಷಾ ಹಾಗೂ ಚಾಲಕರ ವಿವರಗಳು ಠಾಣೆಯಲ್ಲಿ ದಾಖಲಾಗಿರುತ್ತದೆ. ಪುರಸಭೆ ವ್ಯಾಪ್ತಿಯಲ್ಲಿ 200 ಅಧೀಕೃತ ಆಟೋರಿಕ್ಷಾಗಳಿದ್ದು ಸ್ಟಿಕ್ಕರ್ ಆಧಾರದಲ್ಲಿ ಅನಧೀಕೃತ ಆಟೋಗಳ ಮೇಲೆ ನಿಗಾ ವಹಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಕಡೆ ಇದನ್ನು ಅನುಷ್ಠಾನ ಮಾಡುವ ಚಿಂತನೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಟಿಕ್ಕರ್ ವಿತರಣೆ ಸಂದರ್ಭದಲ್ಲಿ ಸಂಚಾರ ಠಾಣೆ ಉಪನಿರೀಕ್ಷಕರಾದ ಪ್ರಸಾದ್ ಕುಮಾರ್ ಕೆ., ಸುದರ್ಶನ್ ಹಾಗೂ ಸಿಬ್ಬಂದಿಗಳು ಇದ್ದರು.