Home » ಪ್ರಕೋಷ್ಠಗಳ ಕ್ರಿಯಾಶೀಲತೆ ಪಕ್ಷದ ಬೆಳವಣಿಗೆಗೆ ಪೂರಕ
 

ಪ್ರಕೋಷ್ಠಗಳ ಕ್ರಿಯಾಶೀಲತೆ ಪಕ್ಷದ ಬೆಳವಣಿಗೆಗೆ ಪೂರಕ

: ಕಿಶೋರ್ ಕುಮಾರ್ ಕುಂದಾಪುರ

by Kundapur Xpress
Spread the love

ಉಡುಪಿ : ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪ್ರೌಡಿಮೆಯನ್ನು ಹೊಂದಿರುವ ಜೊತೆಗೆ ಪಕ್ಷದ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಿರುವ ಪ್ರಬುದ್ಧರನ್ನು ಬಿಜೆಪಿ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರು ಮತ್ತು ವಿವಿಧ ಪ್ರಕೋಷ್ಠಗಳ ಜಿಲ್ಲಾ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಪ್ರಕೋಷ್ಠಗಳ ಕ್ರಿಯಾಶೀಲತೆ ಪಕ್ಷದ ಬೆಳವಣಿಗೆಗೆ ಪೂರಕ ಶಕ್ತಿಯಾಗಿ ಪರಿಣಮಿಸಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರು ಮತ್ತು ವಿವಿಧ ಪ್ರಕೋಷ್ಠಗಳ ಜಿಲ್ಲಾ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರು, ಜಿಲ್ಲಾ ಸಂಚಾಲಕರು ಮತ್ತು ಸಹ ಸಂಚಾಲಕರುಗಳು ಜಿಲ್ಲೆ ಮತ್ತು ಮಂಡಗಳಲ್ಲಿ ಪ್ರತೀ ಪ್ರಕೋಷ್ಠಗಳ ಸಮಿತಿಗಳನ್ನು ರಚಿಸಿ, ಅಂತಹ ಸಮಿತಿಗಳು ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪಕ್ಷ ಸಂಘಟನೆಗೆ ವಿಶೇಷ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ 5ನೇ ಸ್ಥಾನವನ್ನು ಪಡೆದು ಪ್ರಸಕ್ತ 3ನೇ ಸ್ಥಾನಕ್ಕೇರುವ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ. ಭಾರತವನ್ನು ವಿಶ್ವ ಗುರುವನ್ನಾಗಿಸಲು ರಾಷ್ಟ್ರೀಯತೆಯ ಚಿಂತನೆಯುಳ್ಳ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಬಿಜೆಪಿ ಸದಸ್ಯತನವನ್ನು ಪಡೆಯುವ ಮೂಲಕ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದರು.ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ ಮಾತನಾಡಿ ಪಕ್ಷದ ಪಂಚ ನಿಷ್ಠೆಗಳನ್ನು ವಿವರಿಸಿ, ಪ್ರಕೋಷ್ಠಗಳ ಜಿಲ್ಲಾ ಮತ್ತು ಮಂಡಲ ಸಮಿತಿಗಳ ರಚನೆ, ಜವಾಬ್ದಾರಿ ನಿರ್ವಹಣೆಯ ಕುರಿತು ಸಮಗ್ರ ಮಾಹಿತಿ ನೀಡಿ, ಪ್ರಕೋಷ್ಠಗಳ ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರು ಪಕ್ಷದ ಚಟುವಟಿಕೆಗಳಲ್ಲಿ ಬದ್ಧತೆಯಿಂದ ತೊಡಗಿಸಿಕೊಂಡು ರಾಜ್ಯದಲ್ಲೇ ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರುಗಳಾದ ದಿಲೇಶ್ ಶೆಟ್ಟಿ, ಶಂಕರ ಅಂಕದಕಟ್ಟೆ, ಕಾರ್ಮಿಕರ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಶೈಲೇಂದ್ರ ಶೆಟ್ಟಿ, ಪ್ರಬುದ್ಧರ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ರಾಧಾಕೃಷ್ಣ ಶೆಟ್ಟಿ, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ನಿಕಟಪೂರ್ವ ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ದೆ, ಗಿರೀಶ್ ಎಮ್. ಅಂಚನ್ ಹಾಗೂ ವಿವಿಧ ಪ್ರಕೋಷ್ಠಗಳ ಜಿಲ್ಲಾ ಸಂಚಾಲಕರು ಮತ್ತು ಜಿಲ್ಲಾ ಸಹ ಸಂಚಾಲಕರು ಉಪಸ್ಥಿತರಿದ್ದರು.

   

Related Articles

error: Content is protected !!