ಬೆಂಗಳೂರು : ಬೆಂಗಳೂರಿನ ಮನೆಯೊಂದರಲ್ಲಿ ಒಂಟಿ ಮಹಿಳೆಯನ್ನು ಕೊಲೆಗೈದು ಬಳಿಕ ಮೃತದೇಹವನ್ನು 30ಕ್ಕೂ ಅಧಿಕ ತುಂಡು ಮಾಡಿ ಫ್ರಿಜ್ ನಲ್ಲಿ ತುಂಬಿರುವ ಭೀಭಿತ್ಸ ಘಟನೆ ನಡೆದಿದೆ.
ವೈಯಾಲಿಕಾವಲ್ನ ಕಟ್ಟಡವೊಂದರಲ್ಲಿ ಈ ಘಟನೆ ನಡೆದಿದ್ದು ಭೀಕರವಾಗಿ ಕೊಲೆಯಾಗಿರುವ ಮಹಿಳೆಯನ್ನು ಜಾರ್ಖಂಡ್ ಮೂಲದ ಮಹಾಲಕ್ಷ್ಮಿ (29ವರ್ಷ) ಎಂದು ಗುರುತಿಸಲಾಗಿದೆ.
ಯಾವಾಗ ಕೊಲೆಯಾಗಿದೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ, ಸುಮಾರು 11 ದಿನಗಳ ಹಿಂದೆ ಕೊಲೆಯಾಗಿರುವ ಸಾಧ್ಯತೆಯಿದ್ದು, ಶನಿವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ತುಂಡು ಮಾಡಿ 165 ಲೀಟರ್ ಸಾಮರ್ಥ್ಯದ ಫ್ರಿಜ್ಗೆ ತುಂಬಲಾಗಿದೆ.
ಮಹಿಳೆಯ ಈ ಬರ್ಬರ ಕೊಲೆಗೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ಹಂತಕನ ಸುಳಿವೂ ಸಿಕ್ಕಿಲ್ಲ. ಘಟನೆ ಸಂಬಂಧ ಪೊಲೀಸರು ಮೃತಳ ಪತಿ ಹಿಮಾನ್ ದಾಸ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಮನೆಯಲ್ಲಿ ದುರ್ನಾತ:
ಮಹಾಲಕ್ಷ್ಮಿ ನೆಲೆಸಿದ್ದ ಮನೆಯಿಂದ ಕಳೆದ ಎರಡು ದಿನಗಳಿಂದ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ನೆರೆಮನೆ ಮಹಿಳೆಯೊಬ್ಬರು ಶನಿವಾರ ಮಧ್ಯಾಹ್ನ ಮನೆಯ ಬಾಗಿಲು ತೆರೆದು ನೋಡಿದಾಗ ಫ್ರಿಜ್ನಿಂದ ಕಲುಷಿತ ನೀರು ಮಾದರಿಯ ದ್ರಾವಣ ಹರಿದು ಬರುತ್ತಿರುವುದು ಕಂಡುಬಂದಿದೆ. ಬಳಿಕ ಫ್ರಿಜ್ ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿವೆ. ದುರ್ನಾತ ಹಾಗೂ ಆ ಮಾಂಸದ ತುಂಡುಗಳಿಂದ ಹುಳುಗಳು ಹೊರಬರುತ್ತಿರುವುದನ್ನು ಕಂಡ ಆ ಮಹಿಳೆ ಅರೆಕ್ಷಣ ಹೌಹಾರಿದ್ದಾರೆ. ಬಳಿಕ, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕೈಯಾಲಿಕಾವಲ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ
ಸಂಬಂಧಿಕರು ಬಂದ ಬಳಿಕ ಗುರುತು ಪತ್ತೆ:
ಪೊಲೀಸರ ಪರಿಶೀಲನೆ ವೇಳೆ ಫ್ರಿಜ್ನಲ್ಲಿ ತುಂಬಿದ್ದ ಆ ಮಾಂಸದ ತುಂಡಗಳು ಯಾವುದೋ ವ್ಯಕ್ತಿಯದೇ ಇರಬಹುದು ಎಂಬ ಅನುಮಾನ ಬಂದಿದೆ. ಬಳಿಕ ನೆರೆಹೊರೆಯವರ ವಿಚಾರಣೆ ಮಾಡಿದಾಗ ಮಹಿಳೆಯೊಬ್ಬರು ಈ ಮನೆಯಲ್ಲಿ ನೆಲೆಸಿದ್ದ ವಿಚಾರ ಗೊತ್ತಾಗಿದೆ. ಬಳಿಕ ಆಕೆಯ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.