ನ್ಯೂಯಾರ್ಕ್ : ಪ್ರಧಾನಿಯಾಗಿ ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ಅಭಿವೃದ್ಧಿ ಶೀಲವನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವು ಮಹತ್ವಾಕಾಂಕ್ಷೆಯ ಗುರಿ ರೂಪಿಸಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ಉತ್ತಮ ಆಡಳಿತ ಮತ್ತು ಸಮೃದ್ಧ ಭಾರತಕ್ಕಾಗಿ ನನ್ನ ಜೀವನ ಮೀಸಲಿಟ್ಟಿದ್ದೇನೆ ಎಂದು ಘೋಷಿಸಿದ್ದಾರೆ. 3 ದಿನಗಳ ‘ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಇಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರ ತೀಯ ಸಮುದಾಯದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ ಮೋದಿ, ‘ ಭಾರತದ ನಮಸ್ತೆ ಇಂದು ವಿಶ್ವವ್ಯಾಪಿ ಯಾಗುವುದಕ್ಕೆವಿದೇಶಗಳಲ್ಲಿನ ಭಾರತೀಯ ಸಮುದಾಯವೇ ಕಾರಣ. ನೀವೆಲ್ಲಾ ರಾಷ್ಟ್ರ ದೂತರಿದ್ದಂತೆ. ನೀವು ಭಾರತದ ಪ್ರಚಾರ ರಾಯಭಾರಿಗಳು. ಇಡೀ ವಿಶ್ವಕ್ಕೆ ಎಐ ಎಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ಆದರೆ ನಮ್ಮ ಪಾಲಿಗೆ ಅಮೆರಿಕ- ಇಂಡಿಯಾ ಸ್ಫೂರ್ತಿ ಇದ್ದಂತೆ. ಅಮೆರಿಕ ಅಧ್ಯಕ್ಷ ಬೈಡೆನ್ ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ’ ಎಂದು ಹೇಳಿದರು.ಇದೇ ವೇಳೆ ನಾವು ಭಾರತದ ಸ್ವಾತಂತ್ರ್ಯಕ್ಕಾಗಿ ಮಡಿಯದೇ ಇರಬಹುದು, ಆದರೆ ನಾವು ದೇಶಕ್ಕಾಗಿ ಜೀವಿಸಬಹುದು. ಮೊದಲ ದಿನದಿಂದಲೂ ನಾನು ನಿರ್ಧರಿಸಿದ್ದೆ, ನನ್ನ ಇಡೀ ಜೀವನವನ್ನು ಉತ್ತಮ ಆಡಳಿತ ಮತ್ತು ಸಮೃದ್ದ ಭಾರತಕ್ಕೆ ಮೀಸಲಿಡುತ್ತೇನೆ ಎಂದು. ಅದರೆಡೆಗೆ ಇದೀಗ ನಮ್ಮ ಪಯಣ ಆರಂಭವಾಗಿದೆ. ಕಳೆದ 60 ವರ್ಷಗಳಲ್ಲೇ ಕಂಡುಕೇಳರಿಯದ ರೀತಿಯಲ್ಲಿ ದೇಶದ ಜನತೆ ನಮ್ಮ ಪರವಾಗಿ ಫಲಿತಾಂಶ ನೀಡಿ ದೇಶ ಮುನ್ನಡೆಸುವ ಹೊಣೆ ವಹಿಸಿದ್ದಾರೆ.
ನನ್ನ ಮೂರನೇ ಅವಧಿಯಲ್ಲಿ ನಾನು ಮೂರು ಪಟ್ಟು ಹೆಚ್ಚು ಹೊಣೆಗಾರಿಕೆಯಿಂದ ಮುಂದುವರೆಯುತ್ತಿದ್ದೇನೆ. ನಾವು ಸಮೃದ್ಧ ಭಾರತ, ಮುನ್ನುಗ್ಗುತ್ತಿರುವ ಭಾರತ, ಅಧ್ಯಾತ್ಮ ಭಾರತ, ಮಾನವೀಯತೆ ಮೊದಲು ಭಾರತದ ಎಂಬ ಪಂಚ ತತ್ವಗಳ ಮೂಲಕ ವಿಕಸಿತ ಭಾರತ ನಿರ್ಮಾಣ ಮಾಡೋಣ ಎಂದು ಮೋದಿ ಕರೆ ಕೊಟ್ಟರು.