ಅಮರಾವತಿ : ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಂಡು ಬಂದ ಬಗ್ಗೆ ತನಿಖೆ ನಡೆಸಲು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ತರಿಸಲಾಗುವ ಕಚ್ಚಾವಸ್ತುಗಳ ತಫಾಸಣೆ ಹಾಗೂ ಲೆಕ್ಕಪರಿಶೋಧನೆಗೂ ಆದೇಶಿಸಲಾಗಿದೆ ಎಂದಿದ್ದಾರೆ.
ಭಾನುವಾರ ಸುದ್ದಿಗೋಷ್ಠಿ ನಡೆಸಿದ ನಾಯ್ಡು ಐಜಿಪಿ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಇವರು ಸಲ್ಲಿಸುವ ವರದಿಯ ಆಧಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಹಾಗೂ ಇದು ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.