Home » 71 ದಿನಗಳ ನಂತರ ಲಾರಿ,ಚಾಲಕನ ಶವ ಪತ್ತೆ
 

71 ದಿನಗಳ ನಂತರ ಲಾರಿ,ಚಾಲಕನ ಶವ ಪತ್ತೆ

ಶಿರೂರು ಗುಡ್ಡ ಕುಸಿತ

by Kundapur Xpress
Spread the love

ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರ ಶೋಧದ ಕಾರ್ಯಾಚರಣೆಯಲ್ಲಿ ಬುಧವಾರ ಕೇರಳ ಮೂಲದ ಚಾಲಕ ಎನ್ನಲಾದ ಅರ್ಜುನನ ಶವ ಹಾಗೂ ಅವರು ಓಡಿಸುತ್ತಿದ್ದ ಭಾರತ ಬೆಂಜ್ ಲಾರಿ ಪತ್ತೆಯಾಗಿದೆ. ಆ ಮೂಲಕ 71 ದಿನಗಳ ಬಳಿಕ ಜಿಲ್ಲಾಡಳಿತಕ್ಕೆ ಕೊನೆಗೂ ದೊಡ್ಡ ಯಶಸ್ಸು ದೊರೆತಂತಾಗಿದೆ.

ಗಂಗಾವಳಿ ನದಿಯಲ್ಲಿ ಜಿಲ್ಲಾಡಳಿತದಿಂದ ಶೋಧ ಕಾರ್ಯ ವೇಳೆ ಕ್ರೇನ್ ಮೂಲಕ ಬುಧವಾರ ಮಧ್ಯಾಹ್ನ ಬೆಂಜ್ ಲಾರಿಯನ್ನು ಮೇಲಕ್ಕೆತ್ತಿ, ದಡಕ್ಕೆ ತರಲಾಯಿತು. ಲಾರಿಯ ಕ್ಯಾಬಿನ್‌ನಲ್ಲಿಯೇ ಶವ ಪತ್ತೆಯಾಗಿದ್ದು, ಇದು ಅರ್ಜುನನದೆ ಎಂದು ಖಾತ್ರಿಪಡಿಸಲು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ಬಳಿಕವೇ ಅಧಿಕೃತವಾಗಿ ಜಿಲ್ಲಾಡಳಿತ ಘೋಷಿಸಲಿದೆ.

ಘಟನೆಯ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೇ ಜಾಗದಲ್ಲಿ ಶವ ದೊರೆತಿದ್ದು, ಕೇವಲ ಮೂಳೆಗಳಿಗೆ ಅಂಟಿಕೊಂಡಿರುವ ಮಾಂಸದ ಮುದ್ದೆ ಕಂಡು ಬಂದಿದೆ ಲಾರಿಯ ಸ್ಥಿತಿ ಗಮನಿಸಿದಾಗ ಮಣ್ಣು ಕುಸಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿರುವುದು ಗೋಚರಿಸುತ್ತಿದೆ. ಜು.16ರಂದು ದಾಂಡೇಲಿಯಿಂದ ಕಟ್ಟಿಗೆ ತುಂಬಿಕೊಂಡು ಬಂದಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾದ ಶಿರೂರು ಸಮೀಪ ಚಹಾ ಅಂಗಡಿಯ ಬಳಿ ನಿಲ್ಲಿಸಿ ವಿಶ್ರಾಂತಿ ಪಡೆಯುವಾಗ ಉಂಟಾದ ಗುಡ್ಡ ಕುಸಿತದಿಂದಾಗಿ ಲಾರಿ ಸಮೇತ ಚಾಲಕ ಅರ್ಜುನ ಸಹ ಗಂಗಾವಳಿ ನದಿಯಲ್ಲಿ ಬಿದ್ದು ನಾಪತ್ತೆಯಾಗಿದ್ದರು. ಅಲ್ಲದೇ ಘಟನೆಯಲ್ಲಿ ಒಟ್ಟು 11 ಜನರು ನಾಪತ್ತೆಯಾಗಿದ್ದರು. ಆ ಪೈಕಿ ಬುಧವಾರದ ಶವಸೇರಿದಂತೆ ಇಲ್ಲಿಯವರೆಗೆ 9 ಜನರ ಶವಗಳು ಪತ್ತೆಯಾಗಿವೆ. ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಅವರ ಪತ್ತೆಗಾಗಿ ಶೋಧ ಮುಂದುವರಿಯಲಿದೆ.

   

Related Articles

error: Content is protected !!