ಬೆಂಗಳೂರು : ಅಸ್ಸಾಂನ ಗುವಾಟಿಯಲ್ಲಿ ವಿಧ್ವಂಸಕ ಕೃತ್ಯದ ಸಂಚು ನಡೆಸಿದ ಪ್ರಕರಣದ ಸಂಬಂಧ ನಿಷೇಧಿತ ಉಲ್ಟಾ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ) ಸಂಘಟನೆಯ ಶಂಕಿತ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ಗುರುವಾರ ಬೆಂಗಳೂರಿನ ಹೊರವಲಯದ ಜಿಗಣಿಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ.
ಗಿರೀಶ್ ಬರುವಾ (32ವರ್ಷ) ಬಂಧಿತ ಶಂಕಿತ ಉಗ್ರ. ಉಲ್ಟಾ ಉಗ್ರರು ಸ್ವಾತಂತ್ರ್ಯ ದಿನಾಚರಣೆ ವಿರೋಧಿಸಿ ಗುವಾಹಟಿ ಸೇರಿದಂತೆ ಅಸ್ಸಾಂನ ಹಲವೆಡೆ ಸುಧಾರಿತ ಸ್ಪೋಟಕ ಸಾಧನ (ಐಇಡಿ) ಸ್ಪೋಟಿಸಲು ಸಂಚು ರೂಪಿಸಿದ್ದರು. ಈ ಸಂಚು ವಿಫಲವಾದ ಹಿನ್ನೆಲೆಯಲ್ಲಿ ಶಂಕಿತ ಉಗ್ರ ಗಿರೀಶ್ ತಲೆಮರೆಸಿಕೊಂಡಿದ್ದ. ಈತನ ಬೆನ್ನು ಬಿದ್ದಿದ್ದ ಎನ್‌ಐಎ ಅಧಿಕಾರಿಗಳು ಈತನ ಬಗ್ಗೆ ಮಾಹಿತಿ ಸಂಗ್ರಹಿಸಿ, ಸ್ಥಳೀಯ ಪೊಲೀಸರ ನೆರವು ಪಡೆದು ಬಂಧಿಸಿದ್ದಾರೆ.
ಈತ ಕೋರಮಂಗಲದ ಎಫ್ 360 ಎಂಬ ಸೆಕ್ಯೂರಿಟಿ ಏಜೆನ್ಸಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ, ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಎಲಿಮೆಂಟಲ್ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದ. ಈತನ ಪತ್ನಿ ಮತ್ತು ಇನ್ನೊಬ್ಬ ಶಂಕಿತ ಉಗ್ರ ಅಭಿಷೇಕ್ ಎಂಬುವನ ಪತ್ನಿ ಬಾಲ್ಯ ಸ್ನೇಹಿತೆಯರಾಗಿದ್ದರು. ಅಭಿಷೇಕ್ ನೇ ಗಿರೀಶ್ ಗೆ ಅಸ್ಸಾಂನಲ್ಲಿ ಬಾಂಬ್ ಇರಿಸಲು 5 ಲಕ್ಷ ರು. ನೀಡಿದ್ದ, ಆ ಸಂಚು ವಿಫಲವಾದಾಗ, ಅಭಿಷೇಕ್‌ನನ್ನು ಎನ್‌ಐಎ ಬಂಧಿಸಿತ್ತು. ಆಗ ಹೆದರಿದ ಗಿರೀಶ್, ಅಭಿಷೇಕ್‌ನ ಪತ್ನಿಯ ಸಹಾಯ ಪಡೆದು ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದ ಎನ್ನಲಾಗಿದೆ.