ಟೆಹ್ರಾನ್ : ಮಧ್ಯಪ್ರಾಚ್ಯ ಸಂಘರ್ಷ ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಇಸ್ರೇಲ್ ಇನ್ನು ಹೆಚ್ಚು ದಿನ ಉಳಿಯದು ಎಂದು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಬಹಿರಂಗ ಘೋಷಣೆ ಮಾಡಿದ್ದಾರೆ. ಇಸ್ರೇಲ್ ಮೇಲೆ ಇರಾನ್ ಮೂರು ದಿನಗಳ ಹಿಂದೆ ನಡೆಸಿದ 200 ಕ್ಷಿಪಣಿ ದಾಳಿಯನ್ನು ‘ಸಾರ್ವಜನಿಕ ಸೇವೆ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಅಗತ್ಯ ಬಿದ್ದರೆ ಇಸ್ರೇಲ್ ಮೇಲೆ ಮತ್ತೊಂದು ಸುತ್ತಿನಲ್ಲಿ ಭಾರೀ ದಾಳಿ ನಡೆಸುವುದಾಗಿಯೂ ಗುಡುಗಿದ್ದಾರೆ.
ಇಸ್ರೇಲ್ ವಿರುದ್ಧ ಸಂಘರ್ಷದಲ್ಲಿ ನಿರತವಾ ಗಿರುವ ಹಮಾಸ್ ಹಾಗೂ ಹಿಜ್ಜುಲ್ಲಾ ಉಗ್ರರಿಗೆ ಇರಾನ್ ಬೆಂಬಲವಾಗಿ ನಿಂತಿದ್ದು, ಹಿಜ್ಜುಲ್ಲಾ ಉಗ್ರ ಸಂಘಟನೆ ಮುಖ್ಯಸ್ಥ ನಲ್ಲಾ ಹತ್ಯೆ ಬೆನ್ನಲ್ಲೇ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಆ ದಾಳಿಗೆ ಇರಾನ್ ಮೇಲೆ ಪ್ರತೀಕಾರ ತೀರಿಸಿಕೊ ಳ್ಳುವುದಾಗಿ ಇಸ್ರೇಲ್ ಹೇಳುತ್ತಿರುವಾಗಲೇ, ಇಸ್ರೇಲ್ ಹೆಚ್ಚು ದಿನ ಇರುವುದಿಲ್ಲ ಎಂದು ಇರಾನ್ ಬಹಿರಂಗವಾಗಿ ಎಚ್ಚರಿಕೆ ನೀಡಿರುವುದು ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತಷ್ಟು ವಿಕೋಪಕ್ಕೆ ಹೋಗುವ ಸುಳಿವನ್ನು ನೀಡಿದೆ.
ವಿಶೇಷವೆಂದರೆ, ಐದು ವರ್ಷದ ಬಳಿಕ ಶುಕ್ರವಾರ ಪ್ರಾರ್ಥನೆ ವೇಳೆ ಕಾಣಿಸಿಕೊಂಡು ಹತ್ತಾರು ಸಹಸ್ರ ಜನರನ್ನು ಉದ್ದೇಶಿಸಿ ಖಮೇನಿ ಮಾತನಾಡಿದರು. ಇಸ್ರೇಲ್‌ನ ಹಿಟ್ ಲಿಸ್ಟ್‌ನಲ್ಲಿರುವ 85 ವರ್ಷದ ಖಮೇನಿ ತಮ್ಮ ಕೈಯಲ್ಲಿ ರಷ್ಯಾ ನಿರ್ಮಿತ ಅತ್ಯಾಧುನಿಕ ರೈಫಲ್ ಹಿಡಿದುಕೊಂಡೇ ಇಸ್ರೇಲ್‌ಗೆ ಭವಿಷ್ಯದ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು.