ನವದೆಹಲಿ : ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿತ್ತು ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ 5 ಸದಸ್ಯರ ಸ್ವತಂತ್ರ ಎಸ್‌ಐಟಿಯನ್ನು ರಚಿಸಿದೆ. ಆದರೆ ಕೋರ್ಟ್ ಮೇಲುಸ್ತುವಾರಿ ತನಿಖೆಗೆ ನಿರಾಕರಿಸಿರುವ ಅದು, ಕೋರ್ಟುಗಳನ್ನು ‘ರಾಜಕೀಯ ಯುದ್ಧಭೂಮಿ’ಗಳನ್ನಾಗಿ ಬಳಸಲು ಅವಕಾಶ ನೀಡುವುದಿಲ್ಲ ಎಂದಿದೆ. ಈಗಾಗಲೇ ಆಂಧ್ರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸಿ ತನಿಖೆ ಆರಂಭಿಸಿತ್ತು. ಆದರೆ ಆ ಎಸ್‌ಐಟಿ ಬದಲು ಸುಪ್ರೀಂ ಕೋರ್ಟ್ ಸಿಬಿಐ ನಿರ್ದೇಶಕರ ಮೇಲುಸ್ತುವಾರಿಯ ಎಸ್‌ಐಟಿ ರಚನೆಗೆ ಆದೇಶಿಸಿದೆ.
ಇದರಲ್ಲಿ ಒಬ್ಬ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಪ್ರಾಧಿಕಾರದ (ಎಫ್‌ಎಸ್‌ಎಸ್ ಎಐ) ಹಿರಿಯ ಅಧಿಕಾರಿ, ಇಬ್ಬರು ಸಿಬಿಐ ಅಧಿಕಾರಿಗಳು ಮತ್ತು ಇಬ್ಬರು ಆಂಧ್ರಪ್ರದೇಶ ಪೊಲೀಸ್ ಅಧಿಕಾರಿಗಳು ಇರಲಿದ್ದಾರೆ ಎಂದು ನ್ಯಾ| ಬಿ.ಅರ್. ಗವಾಯಿ ಮತ್ತು ನ್ಯಾ| ಕೆ.ವಿ. ವಿಶ್ವನಾಥನ್ ಅವರ ಪೀಠ ಹೇಳಿದೆ.