ಮೈಸೂರು : ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಸಂಗೀತದ ಮಳೆಯನ್ನು ಹರಿಸಿದರು.ಪ್ರೇಕ್ಷಕರು ಇಳಯರಾಜ ಅವರ ಸಂಗೀತ ಸುಧೆಯಲ್ಲಿ ಮಿಂದೆದ್ದರು.
ಜನನಿ ಜನನಿ ಜಗಂ ನೀ ಅಹಂ ನೀ… ಹಾಡಿನೊಂದಿಗೆ ಇಳಯರಾಜ ಸಂಗೀತ ಸುಧೆ ಹರಿಸಲು ಆರಂಭಿಸಿದರು.ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್ .ಪಿ.ಬಿ. ಚರಣ್ ಅವರು ಎಂತಾ ಸೌಂದರ್ಯ ನೋಡು ನಮ್ಮ ಕರುನಾಡ ಬಿಡು, ಸಂತೋಷಕ್ಕೆ ಹಾಡು ಸಂತೋಷಕ್ಕೆ ಕುಣಿದು ತಾಳಕ್ಕೆ ಕುಣಿದು,ಕೇಳದೆ ನಿಮಗೀಗಾ ದೂರದಲ್ಲಿ ಯಾರೋ,.. ಎಂಬ ಮೊದಲಾದ ಎವರ್ ಗ್ರೀನ್ ಹಾಡುಗಳನ್ನು ಹಾಡಿ ತಮ್ಮ ತಂದೆಯಂತೆ ಕೇಳುಗರನ್ನು ಸಂಗೀತ ಸಾಗರದಲ್ಲಿ ತೇಲಾಡಿಸಿದರು.
ಇಳಯರಾಜ ಅವರೊಂದಿಗೆ ಆಗಮಿಸಿದ್ದ ಗಾಯಕರಾದ ಹರಿಚರಣ್,ರೂಪಾವರಿ,ಶರತ್,ಶ್ವೇತಾ ಮೋಹನ್ ಮೊದಲಾದವರು ಹಲವಾರು ಸುಮಧುರ ಗೀತೆಗಳನ್ನು ಹಾಡಿ ನೆರೆದಿದ್ದವರನ್ನು ಸಂಗೀತಲೋಕದಲ್ಲಿ ಮುಳುಗಿಸಿದರು. ಮಳೆಯ ನಡುವೆಯೇ ಸಂಗೀತ ಜ್ಞಾನಿ ಇಳಯರಾಜ ಸಂಗೀತ ಸುಧೆಯೊಂದಿಗೆ 2024ನೇ ಸಾಲಿನ ಯುವ ದಸರಾಗೆ ತೆರೆ ಬಿತ್ತು.