ಉಡುಪಿ : ರಾಜ್ಯ ಕಾಂಗ್ರೆಸ್ ಸರ್ಕಾರ ಕರಾವಳಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಇಂತಹ ಹೊಣೆಗೇಡಿ ಸರ್ಕಾರಕ್ಕೆ ಕರಾವಳಿಯ ಜನತೆ ವಿಧಾನ ಪರಿಷತ್ ಉಪಚುನಾವಣೆ ಮೂಲಕ ಕಠಿಣ ಸಂದೇಶ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದ್ದಾರೆ. ಅವರು ಮಂಗಳವಾರ ಉಡುಪಿ- ದ.ಕ. ಜಿಲ್ಲಾ ಸ್ಥಳಿಯಾಡಳಿತ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಅವರಿಗಂತೂ ಕರಾವಳಿ ಎಂದರೇ ಅಲರ್ಜಿ. ಇಲ್ಲಿನ ಉಸ್ತುವಾರಿ ಸಚಿವರನ್ನು ಬಿಟ್ಟರೆ ಬೇರೆ ಯಾವ ಸಚಿವರೂ ಕರಾವಳಿಗೆ ಬರುತ್ತಿಲ್ಲ, ಪ್ರಗತಿ ಪರಿಶೀಲನೆಯನ್ನೂ ಮಾಡುತ್ತಿಲ್ಲ ಬಂದು ಏನು ಮಾಡುತ್ತಾರೆ ಬದನೆಕಾಯಿ ಇಲ್ಲಿಗೆ 1 ರು. ಅನುದಾನ ನೀಡಿಲ್ಲ, ಇನ್ನು ಪ್ರಗತಿ ಎಲ್ಲಿಂದ ಬಂತು ಪರಿಶೀಲನೆ ಮಾಡುವುದಕ್ಕೆ ಎಂದವರು ಕಟುವಾಗಿ ಟೀಕಿಸಿದರು.
ಈ ಸರ್ಕಾರಕ್ಕೆ ಬೆಂಗಳೂರು ಬಿಟ್ಟರೆ ಬೇರೆ ಜಿಲ್ಲೆಗಳಿಲ್ಲ ಕರಾವಳಿಯ ಶಾಸಕರು ಎಂತಹ ದುರಾದೃಷ್ಟವಂತರೆಂದರೆ ಅವರು ಶಾಸಕರಾಗಿ ಒಂದು ಮುಕ್ಕಾಲು ವರ್ಷ ಕಳೆದರೂ ಒಂದು ಅಭಿವೃದ್ಧಿ ಕೆಲಸಕ್ಕೆ ಅನುದಾನ ಬಂದಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುತಿದ್ದರೆ ಒಬ್ಬೊಬ್ಬ ಶಾಸಕನಿಗೆ 2000 ಸಾವಿರ ಕೋಟಿ ರು. ಅನುದಾನ ಕೊಟ್ಟಿರುತ್ತಿದ್ದರು’ ಎಂದರು.
ದೇಶದಲ್ಲಿ ಇಷ್ಟು ಜನಪ್ರಿಯತೆ ಕಳೆದಕೊಂಡ ಏಕೈಕ ಸರ್ಕಾರ ಇದ್ದರೆ ಅದು ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದ ವಿಜಯೇಂದ್ರ, ವಾಲ್ಮೀಕಿ ಹಗರಣ ಆಯ್ತು, ಮುಡಾ ಹಗರಣ ಆಯ್ತು, ಸಿಎಂ ಕುರ್ಚಿ ಅಲ್ಲಾಡ್ತಿದೆ ಎಂದಾಗ ಸೈಟ್ ಹಿಂದಕ್ಕೆ ನೀಡಿದ್ದಾರೆ. ಮುಂದೆ ಕೆಂಪಯ್ಯ ಆಯೋಗದ 5000 ಕೋಟಿ ರು.ಗಳ ಹಗರಣ ಇದೆ, ಇದು ಹೊರಗೆ ಬಂದ್ರೆ ಸರ್ಕಾರ ತಾನಾಗಿಯೇ ಬೀಳುತ್ತದೆ ಎಂದು ಭವಿಷ್ಯ ನುಡಿದರು.