ಉಡುಪಿ : ಕಾರ್ಕಳದಲ್ಲಿ ನೆಲೆಸಿದ್ದ ಇನ್ನಿಬ್ಬರು ಅಕ್ರಮ ಬಾಂಗ್ಲಾ ವಲಸೆಗಾರರನ್ನು ಕಾರ್ಕಳ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಕಳ ಪೊಲೀಸರಿಂದ ಅವರ ವಿಚಾರಣೆ ನಡೆಯುತ್ತಿದ್ದು ಇಂದು ಅವರನ್ನು ಅಧಿಕೃತವಾಗಿ ಬಂಧಿಸುವ ಸಾಧ್ಯತೆ ಇದೆ.
ಕಳೆದ ವಾರ ಮಲ್ಪೆ ಸಮೀಪದ ತೊನ್ನೆ ಗ್ರಾಮದಲ್ಲಿ 8 ಮಂದಿ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಬಂದ 8 ಮಂದಿ ಯುವಕರನ್ನು ಬಂಧಿಸಲಾಗಿತ್ತು, ಇಲ್ಲಿ ಕಟ್ಟಡ ಕಾರ್ಮಿಕ ಸೋಗಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಅವರ ಬಳಿ ನಕಲಿ ಆಧಾರ್ ಕಾರ್ಡ್, ಅದರ ಆಧಾರದಲ್ಲಿ ಖರೀದಿಸಿದ ಮೊಬೈಲ್‌ಗಳು ಪತ್ತೆಯಾಗಿದ್ದವು. ಒಬ್ಬಾತನಿಂದ ನಕಲಿ ಪಾಸ್‌ಪೋರ್ಟ್‌ನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು. ಬಂಧಿತರಿಂದ ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಮಂದಿ ಅಕ್ರಮ ವಲಸೆಗಾರರಿರುವುದು ಪತ್ತೆಯಾಗಿದ್ದು ಅದರಂತೆ ಕಾರ್ಕಳದಲ್ಲಿ ನೆಲೆಸಿದ್ದ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಮಹಜರು ನಡೆಸಿ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಎಸ್ಪಿಡಾ.ಅರುಣ್ ತಿಳಿಸಿದ್ದಾರೆ.
ನೋಂದಣಿ ಮಾಡಿಕೊಂಡಿಲ್ಲ:
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾ ಪ್ರಜೆಗಳ ಪೊಲೀಸ್ ಕಸ್ಟಡಿ ವಿಚಾರಣೆ ಮುಂದುವರಿದಿದ್ದು, 8 ಮಂದಿಯೂ ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ.