ಮಡಿಕೇರಿ : ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಗುರುವಾರ ಬೆಳಗ್ಗೆ 7.41ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ ಗೋಚರಿಸುವ ಮೂಲಕ ಭಕ್ತರನ್ನು ಪುಳಕಿತರನ್ನಾಗಿಸಿದಳು. ಸೂರ್ಯನು ತುಲಾ ರಾಶಿ ಪ್ರವೇಶಿಸುವ ತುಲಾ ಸಂಕ್ರಮಣದಂದು ಬೆಳಗ್ಗೆ 7.40ಕ್ಕೆ ತೀರ್ಥೋದ್ಭವವಾಗುವುದಾಗಿ ಹೇಳಲಾಗಿತ್ತಾದರೂ, ನಿಗದಿತ ಸಮಯಕ್ಕಿಂತ ಒಂದು ನಿಮಿಷ ತಡವಾಗಿ ತಾಯಿ ಕಾವೇರಿ ಆವಿರ್ಭವಿಸುವುದರೊಂದಿಗೆ ಭಕ್ತರನ್ನು ಹರಸಿದಳು
ತೀರ್ಥರೂಪಿಣಿಯಾಗಿ ಮಾತೆ ಕಾವೇರಿ ದರ್ಶನ
ಕ್ಷೇತ್ರದ ಪ್ರಧಾನ ಅರ್ಚಕ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಅರ್ಚಕ ಸಮೂಹದಿಂದ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಕೆಲವೇ ನಿಮಿಷಗಳಲ್ಲಿ ಅರ್ಚಕರ ಮಂತ್ರಘೋಷ ಹಾಗೂ ಸಹಸ್ರಾರು ಭಕ್ತ ಜನರ ಜೈಜೈ ಮಾತಾ ಕಾವೇರಿ ಮಾತಾ, ಉಕ್ಕಿ ಬಾ ಉಕ್ಕಿ ಬಾ ಕಾವೇರಮ್ಮ ಉಕ್ಕಿ ಬಾ ಎಂಬ ಜಯಘೋಷಗಳ ನಡುವೆ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಗೋಚರಿಸುತ್ತಿದ್ದಂತೆ ಭಕ್ತರು ಭಾವಪರವಶರಾದರು. ತೀರ್ಥೋದ್ಭವವಾಗುತ್ತಿದಂತೆ ಅರ್ಚಕರು ಪವಿತ್ರ ತೀರ್ಥವನ್ನು ಭಕ್ತಾದಿಗಳ ಮೇಲೆ ಪ್ರೋಕ್ಷಣೆ ಮಾಡಿದರು. ತೀರ್ಥ ಪಡೆದು ಭಕ್ತರು ಪುಳಕಿತರಾದರು. ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಎ.ಎಸ್.ಪೊನ್ನಣ್ಯ ಡಾ. ಮಂಥರ್ ಗೌಡ, ಸುಜಾ ಕುಶಾಲಪ್ಪ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಎಎಸ್‌ಪಿ ಸುಂದರ್ ರಾಜ್, ಅಪರ ಜಿಲ್ಲಾಧಿಕಾರಿ ಐಶ್ವರ್ಯ ಸೇರಿ ಅನೇಕರು ಹಾಜರಿದ್ದರು.