ಮಹಾರಾಷ್ಟ್ರ : ಕರ್ನಾಟಕದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಚುನಾವಣೆಗಾಗಿ ಕರ್ನಾಟಕದ ಮದ್ಯ ಮಾರಾಟಗಾರರಿಂದ 700 ಕೋಟಿ ರು. ಲೂಟಿ ಮಾಡಲಾಗಿದೆ. ಈ ಹಣವನ್ನು ಮಹಾರಾಷ್ಟ್ರ ಚುನಾವಣೆಗೆ ಬಳಸಲಾಗುತ್ತಿದೆ’ ಎಂದಿದ್ದಾರೆ ಈ ಮೂಲಕ ಕರ್ನಾಟಕದಲ್ಲಿ ಇತ್ತೀಚೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ವಿರುದ್ಧ ಮದ್ಯ ಮಾರಾಟಗಾರರು ಮಾಡಿರುವ ಲಂಚದ ಆರೋಪವನ್ನುಮೋದಿ ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.
ಮಹಾರಾಷ್ಟ್ರದ ಅಕೋಲಾದಲ್ಲಿ ವಿಧಾನಸಭೆ ಚುನಾವಣೆಯ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ಎಲ್ಲಿ ಸರ್ಕಾರ ರಚಿಸುತ್ತದೆಯೋ ಆ ರಾಜ್ಯವು ಪಕ್ಷದ ‘ಶಾಹಿ ಪರಿವಾರ’ದ (ಗಾಂಧಿ ಪರಿವಾರದ) ಎಟಿಎಂ ಆಗುತ್ತದೆ. ಮಹಾರಾಷ್ಟ್ರ ಚುನಾವಣೆಗಾಗಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಮದ್ಯದ ವ್ಯವಹಾರದಿಂದ 700 ಕೋಟಿರು.ಗಳಷ್ಟು ಸುಲಿಗೆ ಮಾಡಲಾಗಿದೆ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲೂ ಇದು ನಡೆದಿದೆ. ಈ ರಾಜ್ಯಗಳು ಶಾಹಿ ಪರಿವಾರದ ಎಟಿಎಂಗಳಾಗುತ್ತಿವೆ’ ಎಂದರು.
‘ಚುನಾವಣೆ ಗೆಲ್ಲಲು ಕಾಂಗ್ರೆಸ್ ಇಷ್ಟೊಂದು ಭ್ರಷ್ಟಾಚಾರ ನಡೆಸಿದೆ ಎಂದಾದರೆ ಒಮ್ಮೆ ಅಧಿಕಾರಕ್ಕೆ ಬಂದರೆ ಎಷ್ಟು ಭ್ರಷ್ಟಾಚಾರ ಮಾಡುತ್ತದೆ ಎಂದು ನೀವೇ ಊಹಿಸಬಹುದು’ ಎಂದ ಮೋದಿ, ಮಹಾರಾಷ್ಟ್ರದಲ್ಲಿ ಈ ಭ್ರಷ್ಟಾಚಾರ ಪುನಾರಾರ್ತನೆ ಆಗಬಾರದು ಎಂದರೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.