ಹಿಂಗೋಲಿ : ವಿರೋಧ ಪಕ್ಷಗಳ ಪ್ರಮುಖ ನಾಯಕರಾದ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರ ವಿರೋಧದ ನಡುವೆಯೂ ವಕ್ಸ್ ಕಾಯ್ದೆಯ ತಿದ್ದುಪಡಿಗೆ ಪ್ರಧಾನಿ ನರೇಂದ್ರ ಮೋದಿ ಬದ್ಧರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಮಹಾಯುತಿ ಅಭ್ಯರ್ಥಿಗಳನ್ನು ಬೆಂಬಲಿಸಿ ಮಹಾರಾಷ್ಟ್ರದಲ್ಲಿ ಮೂರು ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಅವರು ಮೋದಿ ಸರಕಾರ ಮಾರ್ಚ್ 31 2026ರ ಒಳಗೆ ಛತ್ತೀಸ್‌ಗಢದಿಂದ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುತ್ತದೆ ಎಂದು ಘೋಷಿಸಿದರು. ಇದೇ ವೇಳೆ ಅವರು ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್ ಮತ್ತು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರನ್ನು ಸಾರ್ವಜನಿಕವಾಗಿ ಶ್ಲಾಘಿಸುವಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಸವಾಲು ಹಾಕಿದರು,
ಇಂಡಿ ಮೈತ್ರಿಕೂಟದ ಪಕ್ಷಗಳ ವಿರೋಧದ ಹೊರತಾಗಿಯೂ ಕೇಂದ್ರವು 1995ರ ವಕ್ಸ್ ಕಾಯ್ದೆಗೆ ತಿದ್ದುಪಡಿಗಳನ್ನು ತರಲಿದೆ ಎಂದು ಅವರು ಹೇಳಿದರು. ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ವಕ್ಸ್ (ತಿದ್ದುಪಡಿ) ಮಸೂದೆ, 2024 ಅನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಪರಿಶೀಲಿಸುತ್ತಿದೆ. ಪ್ರಸ್ತಾವಿತ ಕಾನೂನು ವಕ್ಸ್ ಮಂಡಳಿಯ ಕಾರ್ಯವನ್ನು ಸುವ್ಯವಸ್ಥಿತಗೊಳಿಸುವ ಮತ್ತು ವಕ್ಸ್ ಅಸ್ತಿಗಳ ಸಮರ್ಥ ನಿರ್ವಹಣೆಯನ್ನು ಖಚಿತಪಡಿಸುವ ಗುರಿ ಹೊಂದಿದೆ ಎಂದರು