ಕೋಟ : ಕಣ್ಣು ನಮ್ಮ ಅವಿಭಾಜ್ಯ ಅಂಗ. ನಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಈ ನೆಲೆಯಲ್ಲಿ ಪ್ರತಿದಿನ ನಮ್ಮ ಕಣ್ಣುಗಳನ್ನು ಸಾಧ್ಯವಾದಷ್ಟು ಪರಿಶುದ್ಧ ನೀರಿನಲ್ಲಿ ತೊಳೆಯಬೇಕು. ಕಣ್ಣಿನ ಉತ್ತಮ ಪೋಷಣೆಗಾಗಿ ತಾಜಾ ನೈಸರ್ಗಿಕ ತರಕಾರಿಗಳು ಹಾಗೂ ವಿಟಮಿನ್ ಅಂಶವುಳ್ಳ ಹಣ್ಣುಗಳನ್ನು ಸೇವಿಸಬೇಕು. ಪ್ರತಿ 6 ತಿಂಗಳಿಗೊಮ್ಮೆ ಕಣ್ಣನ್ನು ಪರೀಕ್ಷಿಸುವುದು ಕಡ್ಡಾಯವಾಗಿಸಿಕೊಳ್ಳಿ. ಮಗು ಹುಟ್ಟಿದ 15 ದಿನದ ಬಳಿಕ ರೆಟಿನಾ ತಪಾಸಣೆಗೆ ಕಡ್ಡಾಯವಾಗಿ ಒಳಪಡಿಸಲೇ ಬೇಕು. ಪ್ರತಿಯೊಬ್ಬರು ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಿದರೇ ಇನ್ನೊಬ್ಬರ ಬೆಳಕಿಗೆ ದಾರಿಯಾಗುತ್ತದೆ ಎಂದು ಅಸೋಸಿಯೇಷನ್ ಆಫ್ ಕಮ್ಯುನಿಟಿ ಭಾರತ ನೇತ್ರಶಾಸ್ತ್ರಜ್ಞರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಸ್ವಪನ್ ಸಮಂತ್ ಹೇಳಿದರು.
ಅಸೋಸಿಯೇಷನ್ ಆಫ್ ಕಮ್ಯುನಿಟಿ ಭಾರತ ನೇತ್ರಶಾಸ್ತ್ರಜ್ಞರ ಸಂಘ ದೃಷ್ಟಿ ರಥ ಯಾತ್ರ 2024, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಲಯನ್ಸ್ ಕ್ಲಬ್ ಅಮೃತಧಾರ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂದತ್ವ ನಿವಾರಣಾ ವಿಭಾಗ) ಉಡುಪಿ, ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ ಕುಂದಾಪುರ, ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2 ಇವರ ಸಹಯೋಗದೊಂದಿಗೆ ಕಾಲೇಜಿನ ಸಭಾಭವನದಲ್ಲಿ ಭಾನುವಾರ ಜರುಗಿದ ಉಚಿತ ಮಧುಮೇಹ ನೇತ್ರ ತಪಾಸಣಾ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಬಡಜನರಿಗೂ ಉಚಿತವಾಗಿ ಕಣ್ಣಿನ ಚಿಕಿತ್ಸೆಗಳು ಸಿಗಬೇಕು ಎನ್ನುವ ದೃಷ್ಟಿಯಿಂದ ನಮ್ಮ ಸಂಸ್ಥೆಯಿಂದ ಈಗಾಗಲೇ ಹಲವು ಕಡೆ ಉಚಿತವಾಗಿ ಕಣ್ಣಿನ ತಪಾಸಣೆ ಜತೆಗೆ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರು.
ಖ್ಯಾತ ನೇತ್ರ ತಜ್ಞರಾದ ಡಾ.ದಿವಾಕರ್, ಡಾ.ಶಶಿಧರ ಬಿ.ಸಿ, ಡಾ.ಸುಧಾರಾಣಿ, ಲಯನ್ಸ್ ಕ್ಲಬ್ ಅಮೃತಧಾರದ ಅಧ್ಯಕ್ಷೆ ಡಾ. ವಾಣಿಶ್ರೀ ಐತಾಳ್, ಮಾಜಿ ಅಧ್ಯಕ್ಷೆ ಸರಸ್ವತಿ ಪುತ್ರನ್ ಗೋಪಾಡಿ, ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ರಾಮ್ರಾಯ ಆಚಾರ್ಯ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರೋಹಿಣಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಸಾದ್ ನೇತ್ರಾಲಯದ ಆಡಳಿತಾಧಿಕಾರಿ ಎಮ್.ವಿ.ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪಿಆರ್ಒ ಮೋಹನ್ ವಂದಿಸಿದರು.