ಕುಂದಾಪುರ : ಕುಂದಾಪುರ ನಗರದ ಮಧ್ಯಭಾಗದಲ್ಲಿರುವ ಅಧಿದೇವತೆ ಶ್ರೀ ಕುಂದೇಶ್ವರನ ಸನ್ನಿಧಾನದಲ್ಲಿ ಶ್ರೀದೇವರ ಲಕ್ಷ ದೀಪೋತ್ಸವ ಹಾಗೂ ರಥೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು
ಶನಿವಾರ ಬೆಳಗ್ಗೆ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಶತರುದ್ರಾಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆಯಿತು ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಕುಂದಾಪುರ ತಾಲೂಕಿನ ಭಜನ ಮಂಡಳಿಗಳ ಒಕ್ಕೂಟದವರಿಂದ ಶ್ರೀ ದೇವರ ನಾಮ ಸಂಕೀರ್ತನೆ ಮತ್ತು ಕುಣಿತ ಭಜನೆಯೊಂದಿಗೆ ಸಂಜೆಯ ವೇಳೆಗೆ ಸಹಸ್ರಾರು ಹಣತೆಗಳನ್ನು ಬೆಳಗುವ ಮೂಲಕ ಲಕ್ಷದೇಪೋತ್ಸವವು ಸಂಪನ್ನಗೊಂಡಿತು
ರಿಕ್ಷಾ ಚಾಲಕರಿಂದ ಪುರಸಭೆ ಸಮೀಪ ಧರ್ಮಸ್ಥಳ ಮೇಳದ ಯಕ್ಷಗಾನ, ಹೊಸ ಬಸ್ ಸ್ಟಾಂಡ್ ಸಮೀಪ ರಿಕ್ಷಾ ಚಾಲಕರ ಸಂಘದಿಂದ ವಿದ್ಯಾರ್ಥಿವೇತನ, ವಿಶೇಷ ಚೇತನರಿಗೆ ಸಹಾಯಧನ ವಿತರಣೆ, ವಿಜಯ ಕುಮಾರ್ ಕೊಡಿಯಾಲಬೈಲ್. ಅವರ ನಾಟಕ ದೈವರಾಜ ಬಬ್ಬುಸ್ವಾಮಿ ಪ್ರದರ್ಶನಗೊಂಡಿತು. ಹೂವಿನ ವ್ಯಾಪಾರಿಗಳ ಸಂಘದಿಂದ ಜೂನಿಯರ್ ಕಾಲೇಜು ಆವರಣದಲ್ಲಿ ಸಂಗೀತ ರಸಮಂಜರಿ ಜರುಗಿತು
ಕುಂದೇಶ್ವರ ರಥಬೀದಿಯಲ್ಲಿ ಪ್ರತಿಷ್ಠಾಪಿಸಿದ ಚಿತ್ತಾಕರ್ಷಕವಾದ ಬಲರಾಮನ ಮೂರ್ತಿಯು ಜನಮನ ಸೂರೆಗೊಂಡಿತು ಸಹಸ್ರಾರು ಭಕ್ತರು ಬಲರಾಮನ ಮೂರ್ತಿಯ ಜೊತೆ ಸೆಲ್ಫಿ ತೆಗೆಯಲು ಮುಗಿಬಿದ್ದರು
ಕಳೆದ ವರ್ಷಕ್ಕಿಂತ ಈ ಭಾರಿ ಜನದಟ್ಟಣೆ ಇನ್ನಷ್ಟು ಹೆಚ್ಚಿತ್ತು. ಸಂಜೆ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ಹಾಗೂ ಪುಷ್ಪಕ ರಥದಲ್ಲಿ ಶ್ರೀ ದೇವರ ಪುರಮೆರವಣಿಗೆ ಕಟ್ಟೆ ಪೂಜೆ ಕೆರೆದೀಪ ನೆರವೇರಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಶೋಭಾ ಲಕ್ಷ್ಮೀ. ಅರ್ಚಕ ವೃಂದ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಿಬಂದಿ ವರ್ಗ ಉಪಸ್ಥಿತರಿದ್ದರು