ಕುಂದಾಪುರ : ಹಳೆಯ ಕನ್ನಡ ಚಿತ್ರಗೀತೆಗಳ ಸಂಗೀತದ ಗುಚ್ಚವನ್ನು ಶೋತ್ರುಗಳಿಗೆ ನೀಡಿ ಸಂಗೀತ ಪ್ರಿಯರ ಪ್ರೀತಿಗೆ ಪಾತ್ರವಾದ ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಸಂಸ್ಥೆ 13ನೇ ವರ್ಷದ ‘ಇನಿದನಿಯನ್ನು ಜನವರಿ 12ರಂದು ಭಾನುವಾರ ಸಂಜೆ 6.00 ಕ್ಕೆ ಕುಂದಾಪುರ ಬೋರ್ಡ್ ಹೈಸ್ಕೂಲಿನ ವಠಾರದಲ್ಲಿ ಹಮ್ಮಿಕೊಂಡಿದೆ.
ತನ್ನದೇ ವಿಶಿಷ್ಟವಾದ ಯೋಚನೆ ಮತ್ತು ವಿಭಿನ್ನವಾದ ಆಯೋಜನೆಯಿಂದ ಪ್ರಸಿದ್ಧಿ ಪಡೆದ ಕಲಾಕ್ಷೇತ್ರ, ಲಗೋರಿ, ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ, ಕನ್ನಡ ರಥೋತ್ಸವ, ಕನ್ನಡ ಹಬ್ಬ ಇತ್ಯಾದಿ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ಸನ್ನು ಕಂಡಿದೆ. ಅದೇ ರೀತಿ ‘ಇನಿದನಿ’ ಕೂಡ ಕಳೆದ 12 ವರ್ಷಗಳಿಂದ ಹಳೆಯ ಕನ್ನಡ ಚಿತ್ರ ಗೀತೆಗಳ ಇಂಪನ್ನು ಪಸರಿಸಿ ಕೇಳುಗರ ಕರ್ಣಾನಂದಕ್ಕೆ ಕಾರಣವಾಗಿದೆ.
ಮಾಧುರ್ಯ ಪ್ರಧಾನವಾದ ಸಿನಿಮಾ ಗೀತೆಗಳನ್ನು ಮಧುರವಾಗಿ ಪ್ರಸ್ತುತ ಪಡಿಸಿ, ಅಬ್ಬರದ ಸಂಗೀತವಿಲ್ಲದ, ಕೇಳಲು ಸುಶ್ರಾವ್ಯ ಎನಿಸುವ ಗೀತೆಗಳನ್ನು ಆಯ್ದು ಹಾಡಿಸುವುದು ಇನಿದನಿಯ ವೈಶಿಷ್ಟ್ಯ. ಹಾಗಾಗಿ ಇನಿದನಿ ಸಾಮಾನ್ಯ ರಸಮಂಜರಿಯಂತಲ್ಲದೆ ಅದೊಂದು ಅನನ್ಯ ಸಂಗೀತಾನುಭೂತಿಯನ್ನು ಕೇಳುಗರಿಗೆ ಉಣ ಬಡಿಸುತ್ತಿದೆ. ಈ ಕಾರಣಕ್ಕಾಗಿ ಎಂಟು ಸಾವಿರಕ್ಕೂ ಅಧಿಕ ಮಂದಿ ಸಂಗೀತಾಭಿಮಾನಿಗಳು ಅಂದು ಅಲ್ಲಿ ಭಾಗವಹಿಸುತ್ತಾರೆ.
ಬೆಂಗಳೂರು ಹೊರತು ಪಡಿಸಿದರೆ ಇನ್ನೊಂದು ಅತೀ ದೊಡ್ಡ, ಅತೀ ಹೆಚ್ಚು ಪ್ರೇಕ್ಷಕರು ಸೇರುವ ಮತ್ತು ನಿರಂತರತೆಯನ್ನು ಕಾಪಿಟ್ಟುಕೊಂಡು, ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮದ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಸತತವಾಗಿ 13 ವರ್ಷ ನಡೆದ ಸಂಗೀತ ಕಾರ್ಯಕ್ರಮವಿದ್ದರೆ ಅದು ಕುಂದಾಪುರದಲ್ಲಿ ನಡೆಯುವ ‘ಇನಿದನಿ’ ಎಂಬುವುದು ಉಡುಪಿ ಜಿಲ್ಲೆಗೆ ಹೆಮ್ಮೆ.
ನಾಡಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಮುಖ ಹಾಡುಗಾರರಾಗಿ ಬೆಂಗಳೂರಿನ ರಮೇಶ್ಚಂದ್ರ, ಶ್ರುತಿ ಭಿಡೆ, ಮೋಹನಕೃಷ್ಣ ಹಾಗೂ ಮಾಲಿನಿ ಕೇಶವ ಪ್ರಸಾದ್ ಹಾಗೂ ಮಂಗಳೂರಿನ ವೈ. ಎನ್. ರವೀಂದ್ರ, ಕುಂದಾಪುರದ ಅಶೋಕ್ ಸಾರಂಗ್, ಧಾರಿಣಿ, ಪ್ರಾಪ್ತಿ, ಕಮಲ್ ಭಾಗವಹಿಸಲಿದ್ದಾರೆ.
ವಾದ್ಯ ವೃಂದದಲ್ಲಿ ರಾಜಗೋಪಾಲ್ ಆಚಾರ್ಯ, ದೀಪಕ್ ಶಿವಮೊಗ್ಗ, ರಾಜೇಶ್ ಭಾಗವತ್, ಭಾಸ್ಕರ ಕುಂಬ್ಳೆ, ಗಣೇಶ್ ನವಗಿರಿ, ವಾಮನ ಕುಮಾರ್ ಕಾರ್ಕಳ, ಕೇರಳದ ಶಿಜಿಮೂನ್, ದೀಪಕ್ ಬೆಂಗಳೂರು, ಸುಮುಖ್ ಆಚಾರ್ಯ, ಅಭಿಷೇಕ್, ಟೋನಿ ಡಿ’ಸಿಲ್ವಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕೆ.ವಿ. ರಮಣ್ ಮೂಡುಬಿದರೆ ನಿರ್ವಹಿಸಲಿದ್ದಾರೆ.
ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕೆಂದು ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.