ಅರ್ಲಿಂಗ್ಟನ್ : ರನ್‌ವೇನಲ್ಲಿ ಇಳಿಯಲು ಆಗಮಿಸುತ್ತಿದ್ದ ವಿಮಾನವೊಂದಕ್ಕೆ ಸೇನಾ ಹೆಲಿಕಾಪ್ಟರ್ ಆಗಸದಲ್ಲೇ ಡಿಕ್ಕಿ ಹೊಡೆದ ಭೀಕರ ಘಟನೆಯೊಂದು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಹೊರ ವಲಯದ ವಿಮಾನ ನಿಲ್ದಾಣವೊಂದರಲ್ಲಿ ಸಂಭವಿಸಿದೆ. ಘಟನೆಯಲ್ಲಿ ಎಲ್ಲಾ 67 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನ ಮತ್ತು ಸಂಸತ್ ಭವನವಾದ ಕ್ಯಾಪಿಟಲ್ ಹಿಲ್‌ನಿಂದ ಕೇವಲ 3 ಕಿ.ಮೀ ದೂರದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ
ಘಟನೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ.ಈಕುರಿತುತನಿಖೆಗೆ ಆದೇಶಿಸಲಾಗಿದೆ. ಘಟನಾ ಸ್ಥಳದಿಂದ ಭಾರತೀಯ ಕಾಲಮಾನ ಗುರುವಾರ ರಾತ್ರಿಯವರೆಗೆ 30 ಶವಗಳನ್ನು ಪತ್ತೆ ಹಚ್ಚಲಾಗಿದೆ. ಉಳಿದವರು ಕೂಡ ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಾಯ್ತು?
ನಾಲ್ವರು ಸಿಬ್ಬಂದಿ ಮತ್ತು 60 ಪ್ರಯಾಣಿಕರನ್ನು ಹೊತ್ತಿದ್ದ ಅಮೆರಿಕನ್ ಏರ್ ಲೈನ್ಸ್‌ಗೆ ಸೇರಿದ ವಿಮಾನ ಕನಾಸ್‌ನ ವಿಚಿಟಾ ನಗರದಿಂದ ಆಗಮಿಸಿ ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಜ್ಜಾಗುತ್ತಿತ್ತು. ಈ ವೇಳೆ ಮೂವರು ಯೋಧರನ್ನು ಹೊತ್ತಿದ್ದ ಸೇನಾ ಹೆಲಿಕಾಪ್ಟರ್ ಏಕಾಏಕಿ ಅದೇ ಮಾರ್ಗದಲ್ಲಿ ಬಂದು ವಿಮಾನಕ್ಕೆ ಡಿಕ್ಕಿ ಹೊಡೆದು ಭೀಕರ ದುರ್ಘಟನೆ ಸಂಭವಿಸಿದೆ. ವಿಮಾನ ಮತ್ತು ಕಾಪ್ಟರ್ ಡಿಕ್ಕಿಯ ದೃಶ್ಯಗಳು ಸಮೀಪದ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದು, ಅಪಘಾತದ ಬಳಿಕ ಭಾರೀ ಪ್ರಮಾಣದ ಬೆಳಕು ಹೊರ ಹೊಮ್ಮಿದ್ದು ಕಂಡುಬಂದಿದೆ. ಡಿಕ್ಕಿ ಬಳಿಕ ಕಾಪ್ಟರ್ ಮತ್ತುವಿಮಾನವು ಸಮೀಪದ ಪೋಟೋಮ್ಯಾಕ್ ನದಿಯಲ್ಲಿ ಪತನಗೊಂಡಿದೆ.
ಏರ್‌ಟ್ರಾಫಿಕ್ ಜೊತೆ ಸಂವಾದ :
ಡಿಕ್ಕಿ ಘಟನೆಗೂ ಕೆಲವೇ ಕ್ಷಣಗಳ ಮೊದಲು ಏರ್ ಟ್ರಾಫಿಕ್ ಕಂಟ್ರೋಲರ್ ಸಿಬ್ಬಂದಿಗಳು ವಿಮಾನದ ಪೈಲಟ್ ಮತ್ತು ಕಾಪ್ಟರ್‌ನ ಪೈಲಟ್ ಜೊತೆ ಸಂವಾದ ನಡೆಸಿದ ಅಂಶಗಳು ಬಹಿರಂಗಗೊಂಡಿದೆ.
ಅದರಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ, ವಿಮಾನದ ಪೈಲಟ್‌ಗೆ ಮಾಡಿದ ಕರೆಯಲ್ಲಿ ರನ್‌ವೇ ನಂ.33ರಲ್ಲಿ ಇಳಿಯಲು ಸಾಧ್ಯವೇಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪೈಲಟ್ ಕಡೆಯಿಂದ ಸಾಧ್ಯ ಎಂಬ ಉತ್ತರ ಬಂದಿದೆ. ಹೀಗಾಗಿ ಅಲ್ಲಿ ವಿಮಾನ ಇಳಿಸಲು ರನ್‌ವೇ ಅನ್ನು ಮುಕ್ತಗೊಳಿಸಲಾಗಿತ್ತು. ಇನ್ನು ದುರ್ಘಟನೆಗೆ ಕೇವಲ 30 ಸೆಕೆಂಡ್‌ಗೆ ಮುನ್ನ ಕಾಪ್ಟರ್ ಪೈಲಟ್‌ಗೆ ಮಾಡಿದ್ದಕರೆಯಲ್ಲಿ ರನ್ ವೇನಲ್ಲಿ ಇಳಿಯಲು ಸಜ್ಜಾಗಿರುವ ವಿಮಾನ ಕಾಣಿಸುತ್ತಿದೆಯೇ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ಉತ್ತರ ಬರದೇ ಇದ್ದಾಗ ಮತ್ತೊಮ್ಮೆ ಕರೆ ಮಾಡಿ ಪ್ರಶ್ನಿಸಿದ್ದಾರೆ. ಅದರ ಬೆನ್ನಲ್ಲೇ ಕಾಪ್ಟರ್ ಮತ್ತು ವಿಮಾನದ ನಡುವೆ ಡಿಕ್ಕಿ ಸಂಭವಿಸಿದೆ.