- ಭ್ರಮಾಧೀನ ಬದುಕು
ಸಂಪತ್ತನ್ನು ಗಳಿಸುವ ಭರದಲ್ಲಿ ನಮ್ಮಲ್ಲಿ ಆಗುವ ಮೂಲಭೂತ ಬದಲಾವಣೆಗಳು ಯಾವುವು ಎನ್ನುವುದನ್ನು ನಾವು ಗಮನಿಸಬೇಕು. ಏಕೆಂದರೆ ನಮ್ಮ ಮನೋಭಾವದಲ್ಲಿ ಉಂಟಾಗುವ ಆ ಬದಲಾವಣೆಗಳೇ ಸರ್ವ ದುಃಖ ಮೂಲವಾಗಿವೆ. ಸಂಪತ್ತು ವೃದ್ಧಿಸಿದಂತೆ ಅದು ನಮ್ಮಲ್ಲಿ ಉಂಟು ಮಾಡುವ ಶಾಶ್ವತೆಯ ಭಾವ ಅತ್ಯಂತ ವಿಲಕ್ಷಣವಾದದ್ದು. ನಾನು, ನನ್ನವರು, ನನ್ನ ಸಂಪತ್ತು, ನನ್ನ ಬಂಗಲೆ, ನನ್ನ ಕಾರು, ನನ್ನ ಆಸ್ತಿ – ಪಾಸ್ತಿ, ನಾನು ಕೂಡಿಟ್ಟಿರುವ ಚಿನ್ನದ ಒಡವೆಗಳು – ಹೀಗೆ ಪ್ರತಿಯೊಂದರ ಮೇಲಿನ ವ್ಯಾಮೋಹ ಹೆಚ್ಚುತ್ತಲೇ ಹೋಗಿ ನಾನು ಮತ್ತು ನನ್ನದೆಲ್ಲವೂ ಶಾಶ್ವತ ಎಂಬ ಭ್ರಾಂತಿ ನಮ್ಮಲ್ಲಿ ತನ್ನಿಂತಾನೇ ಬಲಗೊಳ್ಳುತ್ತದೆ. ಈ ಭ್ರಾಂತಿಯನ್ನು ಬುಡಮೇಲು ಮಾಡುವ ಸಣ್ಣಪುಟ್ಟ ಘಟನೆಗಳು ನಡೆದರೂ ಸಾಕು ನಾವು ತತ್ತರಿಸಿ ಹೋಗುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ತಾನು ಕಷ್ಟಪಟ್ಟ ಕೂಡಿಟ್ಟ ಸಂಪತ್ತನ್ನು ತನ್ನ ಮಕ್ಕಳು, ಬಂಧುಗಳೇ ಸೇರಿ ಲಪಟಾಯಿಸಿದಾಗ, ಅಥವಾ ಆ ಸಂಪತ್ತಿಗಾಗಿ ಅವರು ತನ್ನನ್ನೇ ಮೂಲೆಗೊತ್ತಿದಾಗ ಆಗುವ ವೇದನೆಯಂತೂ ಹೇಳತೀರದು! ಶ್ರೀಮಂತನ ಮೊದಲ ಶತ್ರು ಯಾರು ಎಂಬ ಪ್ರಶ್ನೆಗೆ ಶ್ರೀ ಶಂಕರಾಚಾರ್ಯರ ಉತ್ತರ ‘ಆತನ ಪುತ್ರನೇ’ ಎಂಬುದಾಗಿದೆ. ಸಂಪತ್ತಿನ ಕುರಿತಾಗಿ ಸಿರಿವಂತನಲ್ಲಿರುವ ಭಯವೆಲ್ಲ ಆತನ ಮಗನಲ್ಲೇ ಅಡಗಿರುತ್ತದೆ ಎಂಬ ಎಚ್ಚರಿಕೆಯನ್ನೂ ಶಂಕರಾಚಾರ್ಯರು ಕೊಡುತ್ತಾರೆ. ಅಷ್ಟು ಮಾತ್ರವಲ್ಲ, ಸಿರಿವಂತಿಕೆಯ ಬೆನ್ನುಹತ್ತಿದವನಿಗೆ ಆಚಾರ್ಯರು ಇನ್ನೂ ಗಂಭೀರವಾಗಿ ಎಚ್ಚರಿಸುತ್ತಾರೆ. ಹಣ ಗಳಿಸುವ ಬಲ ಎಲ್ಲಿಯವರೆಗೆ ನಿನ್ನಲ್ಲಿ ಇರುವುದೋ ಅಲ್ಲಿಯವರೆಗೆ ಮಾತ್ರವೇ ನಿನ್ನ ಜನ – ಪರಿವಾರ ನಿನ್ನ ಜತೆಗಿರುವರು. ಯಾವಾಗ ನಿನ್ನ ದೇಹ ಜರ್ಜರಿತವಾಗುವುದೋ ಆವಾಗ ಅದೇ ಜನ – ಪರಿವಾರ ನಿನ್ನ ಸಂಗಡ ಮಾತನ್ನೂ ಆಡರು!