ಕುಂದಾಪುರ : ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಾವುಂದದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಬೆಂಗಳೂರಿನಿಂದ ಗೋಕರ್ಣದತ್ತ ಸಾಗುತ್ತಿದ್ದ ಕೆಎ 04 ಎನ್‌ಡಿ 6994 ಸಂಖ್ಯೆಯ ಎರ್ಟಿಗಾ ಕಾರು, ನಾವುಂದದ ನಂಬಿಯಾರ್ ಕ್ಲಿನಿಕ್ ಎದುರು ಗ್ರೀಸಿಂಗ್‌ಗಾಗಿ ನಿಲ್ಲಿಸಿದ್ದ ವೇಳೆ Goods G& J Carrier ಲಾರಿಯು ಹಿಂಬದಿಯಿಂದ ಅಪ್ಪಳಿಸಿದೆ. ಅಪಘಾತದ ವೇಳೆ ಕಾರು ಅತಿವೇಗದಲ್ಲಿ ಸಂಚರಿಸುತ್ತಿತ್ತು ಎಂದು ತಿಳಿದುಬಂದಿದೆ. 
ಡಿಕ್ಕಿಯ ಪರಿಣಾಮ ಕಾರಿನ ಎಡಭಾಗ ಸಂಪೂರ್ಣ ನಾಶವಾಗಿದ್ದು, ಎಡಭಾಗದಲ್ಲಿ ಕುಳಿತಿದ್ದ ಮಹಿಳೆ ಹಾಗೂ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿಗೆ ಕುಂದಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಮಣಿಪಾಲಕ್ಕೆ ಸಾಗಿಸಲಾಗಿದೆ.ಈ ಲಾರಿಯು ಇಬ್ರಾಹಿಂ ಅವರಿಗೆ ಸೇರಿದು ಗ್ರೀಸಿಂಗ್ ಅಂಗಡಿ ಎದುರು ನಿಲ್ಲಿಸಲಾಗಿತ್ತು. ಸ್ಥಳೀಯರ ಪ್ರಕಾರ, ಇಲ್ಲಿ ಸರಕು ಸಾಗಣೆ ಲಾರಿಗಳು ನಿರಂತರವಾಗಿ ಗ್ರೀಸಿಂಗ್‌ಗಾಗಿ ನಿಲ್ಲಿಸಲಾಗುತ್ತಿದ್ದು, ಅನಿಯಮಿತವಾಗಿ ವಾಹನ ನಿಲುಗಡೆ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.ಈ ಹಿಂದೆ ಕೂಡ ಏರ್ ಟ್ಯಾಂಕರ್ ಸ್ಫೋಟ ಹಾಗೂ ಟಯರ್ ಬ್ಲಾಸ್ಟ್ ಘಟನೆಗಳು ಸಂಭವಿಸಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ಗೆ ದೂರು ನೀಡಲಾಗಿತ್ತು. ಬಳಿಕ ವಾಹನಗಳನ್ನು ನಿಯಮಿತ ಅಂತರದಲ್ಲಿ ನಿಲ್ಲಿಸಲು ಹಾಗೂ ಗ್ಯಾಸ್ ಟ್ಯಾಂಕರ್‌ಗಳಿಗೆ ಗ್ರೀಸಿಂಗ್ ನಿಷೇಧಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ, ನಿಯಮಗಳ ಉಲ್ಲಂಘನೆ ಮುಂದುವರಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಅಪಘಾತಕ್ಕೊಳಗಾದ ವಾಹನಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಗುರುತು ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

